Search
  • Rajanikanth

"ವಿಕಾಸದ ಬೆಳಕಿನಲ್ಲಲ್ಲದೆ ಜೀವಶಾಸ್ತ್ರದಲ್ಲಿ ಏನೂ ಅರ್ಥಪೂರ್ಣವಲ್ಲ" -ಥಿಯೋಡೋಸಿಯಸ್ ಡೊಬ್ಝಾನ್ಸ್ಕಿ


ವಿಶ್ವದ ಪ್ರಮುಖ ತಳಿವಿಜ್ಞಾನಿಗಳಲ್ಲಿ ಒಬ್ಬರಾದ ಥಿಯೋಡೋಸಿಯಸ್ ಡೊಬ್ಝಾನ್ಸ್ಕಿ ಅವರು ರಾಕ್ಫೆಲ್ಲರ್ ವಿಶ್ವವಿದ್ಯಾಲಯದ ಎಮೆರಿಟಸ್ ಪ್ರಾಧ್ಯಾಪಕರು ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಡೇವಿಸ್‌ ನ ಸಂಯೋಜನಾ ಪ್ರಾಧ್ಯಾಪಕರಾಗಿದ್ದರು. 1900 ರಲ್ಲಿ ರಷ್ಯಾದಲ್ಲಿ ಜನಿಸಿದ ಇವರು ಕೀವ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ ಮತ್ತು 1927 ರಲ್ಲಿ ಅಮೇರಿಕಾಗೆ ಗೆ ಬರುವ ಮೊದಲು ಲೆನಿನ್ಗ್ರಾಡ್ ಯೂನಿವರ್ಸಿಟಿಯಲ್ಲಿ (ಜೆ. ಫಿಲಿಪ್ಚೆಂಕೊ ಅವರೊಂದಿಗೆ) ಭೋಧಿಸಿದರು; ನಂತರ ಅವರು ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಿಸಿ, 1962 ರಲ್ಲಿ ರಾಕ್ಫೆಲ್ಲರ್ ನಲ್ಲಿ ಅಧ್ಯಾಪಕರಾಗಿ ಸೇರಿದರು. ಅವರು ಜೆನೆಟಿಕ್ಸ್ ಸೊಸೈಟಿ ಆಫ್ ಅಮೇರಿಕಾ (ಅಮೇರಿಕಾದ ತಳಿಶಾಸ್ತ್ರ ಸಮುದಾಯ), ಅಮೇರಿಕನ್ ಸೊಸೈಟಿ ಆಫ್ ನ್ಯಾಚುರಲಿಸ್ಟ್ಸ್ (ಅಮೇರಿಕಾದ ನೈಸರ್ಗಿಕವಾದಿಗಳ ಸಮುದಾಯ), ಸೊಸೈಟಿ ಫಾರ್ ದಿ ಸ್ಟಡಿ ಆಫ್ ಎವಲ್ಯೂಷನ್ (ವಿಕಾಸವಾದದ ಅಧ್ಯಯನ ಸಮುದಾಯ), ಅಮೇರಿಕನ್ ಸೊಸೈಟಿ ಆಫ್ ಜೂವಾಲಜಿಸ್ಟ್ಸ್ (ಅಮೇರಿಕದ ಪ್ರಾಣಿಶಾಸ್ತ್ರ ಸಮುದಾಯ ) ಮತ್ತು ಅಮೇರಿಕನ್ ಟೈಲ್-ಹಾರ್ಡ್ ಡಿ ಚಾರ್ಡಿನ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದರು. ಇವರಿಗೆ ಅನೇಕ ಗೌರವಗಳು ಸಂದಿದ್ದು, ರಾಷ್ಟ್ರೀಯ ವಿಜ್ಞಾನ ಪದಕ (1964) ಮತ್ತು ವಿಜ್ಞಾನದಲ್ಲಿ ವಿಶಿಷ್ಟ ಸಾಧನೆಗಾಗಿ ಚಿನ್ನದ ಪದಕ ಪ್ರಶಸ್ತಿ (1969), ಇವು ಮುಖ್ಯವಾಗಿವೆ. ದೇಶ ಮತ್ತು ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳಿಂದ ಇವರಿಗೆ 18 ಗೌರವ ಡಾಕ್ಟರೇಟ್ ಸಂಧಿವೆ. ದಿ ಬಯೋಲಾಜಿಕಲ್ ಬೇಸಿಸ್ ಆಫ್ ಹ್ಯೂಮನ್ ಫ್ರೀಡಮ್ (1956) ಮತ್ತು ಮ್ಯಾನ್‌ಕೈಂಡ್ ಎವೊಲ್ವಿಂಗ್ (1963) ಇವರ ಪ್ರಸಿದ್ಧ ಪುಸ್ತಕಗಳು. ಪ್ರಸ್ತುತ ಈ ಪ್ರಭಂಧವನ್ನು, 1972 ರ ಎನ್.‌ ಎ. ಬಿ.ಟಿ. (NABT) ಸಮಾವೇಶದಲ್ಲಿ ಪ್ರಸ್ತುತಪಡಿಸಿದರು.


ಈ ಪ್ರಭಂಧದ ಇಂಗ್ಲೀಷ್‌ ಆವೃತ್ತಿಯನ್ನು ಕೆಳಗಿನ ಕೊಂಡಿಯಲ್ಲಿ ಓದಬಹುದು

https://biologie-lernprogramme.de/daten/programme/js/homologer/daten/lit/Dobzhansky.pdf        1966 ರಲ್ಲಿ, ಶೇಕ್ ಅಬ್ದುಲ್ ಅಜೀಜ್ ಬಿನ್ ಬಾಜ್ ತನ್ನ ಪ್ರಾಂತ್ಯದಲ್ಲಿ ಹರಡುತ್ತಿದ್ದ ಧರ್ಮದ್ರೋಹವನ್ನು ನಿಗ್ರಹಿಸಲು ಸೌದಿ ಅರೇಬಿಯಾದ ರಾಜನನ್ನು ಕೇಳಿಕೊಂಡನು. "ಪವಿತ್ರ ಕುರಾನ್, ಪ್ರವಾದಿಯ ಬೋಧನೆಗಳು, ಇಸ್ಲಾಮಿಕ್ ವಿಜ್ಞಾನಿಗಳ ಬಹುಸಂಖ್ಯಾತತೆ ಮತ್ತು ವಾಸ್ತವ ಸಂಗತಿಗಳು, ಸೂರ್ಯನು ತನ್ನ ಕಕ್ಷೆಯಲ್ಲಿ ಚಲಿಸುತ್ತಿರುವುದನ್ನು ಸಾಬೀತುಪಡಿಸುತ್ತದೆ....ಮತ್ತು ಭೂಮಿಯು  ಸ್ಥಿರವಾಗಿದ್ದು, ದೇವರು ಭೂಮಿಯನ್ನು ಮಾನವಕುಲಕ್ಕಾಗಿ ಸೃಷ್ಠಿಸಿದ್ದಾನೆ... ಇದರಿಂದ ವಿಭಿನ್ನ ಅಭಿಪ್ರಾಯ ಹೊಂದಿರುವವರು ದೇವರು, ಕುರಾನ್ ಮತ್ತು ಪ್ರವಾದಿಯವರ ಮೇಲೆ ಸುಳ್ಳಿನ ಆರೋಪವನ್ನು ಮಾಡುತ್ತಾರೆ" ಎಂದು ಶೇಕ್ ಬರೆದರು.


        ಶೇಕ್ ಸ್ಪಷ್ಟವಾಗಿ ಕೋಪರ್ನಿಕನ್ ಸಿದ್ಧಾಂತವನ್ನು "ಕೇವಲ ಸಿದ್ಧಾಂತವೇ ಹೊರತು",  "ಸತ್ಯವಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಅವರು ತಾಂತ್ರಿಕವಾಗಿ ಸರಿಯಾಗಿದ್ದರೂ, ಒಂದು ಸಿದ್ಧಾಂತವನ್ನು ಸಾಮೂಹಿಕ ಸಂಗತಿಗಳಿಂದ ಪರಿಶೀಲಿಸಿದಾಗ, ಅದು ಸಾಬೀತಾದ ಸಿದ್ಧಾಂತವಾಗುತ್ತದೆಯೇ ಹೊರತು, ಸತ್ಯವಲ್ಲ. ಕೋಪರ್ನಿಕನ್ ಧರ್ಮದ್ರೋಹಿಗಳನ್ನು ನಿಗ್ರಹಿಸಲು ರಾಜನನ್ನು ಕೇಳುವ ಮೊದಲೇ, ಬಾಹ್ಯಾಕಾಶ ಯುಗ ಪ್ರಾರಂಭವಾಗಿದೆ ಎಂದು ಶೇಕ್ಗೆ ತಿಳಿದಿರಲಿಲ್ಲ. ಭೂಮಿಯ ಗೋಳಾಕಾರವನ್ನು ಗಗನಯಾತ್ರಿಗಳು ಮತ್ತು ಅನೇಕ ಭೂ-ಪರಿಮಿತಿಯ ಜನರು ಅವರ ದೂರದರ್ಶನದ ಪರದೆಗಳ ಮೇಲೆ ಈಗಾಗಲೇ ನೋಡಿದ್ದಾರೆ. ಭೂಮಿಯು ನಿಜವಾಗಿಯೂ ಸಮತಟ್ಟಾಗಿದ್ದು, ದೇವರು ಸೃಷ್ಠಿಸಿದ ಭೂಮಿಯ ಮಿತಿಗಳನ್ನು ಮೀರಿ ಸಾಹಸ ಮಾಡುವವರು ಭ್ರಮೆಯಿಂದ ಬಳಲುತ್ತಿದ್ದಾರೆ ಎಂದು ಶೇಕ್ ಪ್ರತಿಕ್ರಿಯಿಸಬಹುದು. ಕೋಪರ್ನಿಕನ್ ವಿಶ್ವ ಮಾದರಿಯ ಭಾಗಗಳಾದ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ, ಮತ್ತು ಪ್ರತಿಯಾಗಿ ಅಲ್ಲ ಎಂಬ ವಿವಾದವು, ಭೂಮಿಯ ಗೋಳಾಕಾರದ ಮಟ್ಟಿಗೆ ನೇರ ಅವಲೋಕನಗಳಿಂದ ಪರಿಶೀಲಿಸಲ್ಪಟ್ಟಿಲ್ಲ. ಆದರೂ ವಿಜ್ಞಾನಿಗಳು ಈ ಮಾದರಿಯನ್ನು ವಾಸ್ತವದ ನಿಖರ ನಿರೂಪಣೆಯಾಗಿ ಸ್ವೀಕರಿಸುತ್ತಾರೆ. ಏಕೆ? ಏಕೆಂದರೆ  ಇದು ಬಹುಸಂಖ್ಯೆಯ ಸತ್ಯಗಳನ್ನು ಅರ್ಥೈಸುತ್ತದೆ.  ವಿಷಯ  ತಜ್ಞರಲ್ಲದವರಿಗೆ ಈ  ಸಂಗತಿಗಳು ಪರಿಚಯವಿಲ್ಲದವು. ಹಾಗಾದರೆ ಭೂಮಿಯು ಗೋಳಾಕಾರದ ಸೂರ್ಯನ ಸುತ್ತ ಸುತ್ತುವ ಗೋಳ ಎಂಬ "ಕೇವಲ ಸಿದ್ಧಾಂತ" ವನ್ನು ನಾವು ಏಕೆ ಸ್ವೀಕರಿಸುತ್ತೇವೆ? ನಾವು ಕೇವಲ ಅಧಿಕಾರಕ್ಕೆ ಅಧೀನರಾಗುತ್ತಿದ್ದೇವೆಯೇ? ಅಲ್ಲ: ಅಧ್ಯಯನ ಮಾಡಿದವರಿಗೆ ಸಿಕ್ಕ ಪುರಾವೆಗಳು ಒಪ್ಪುವಂತವು ಎಂದು ನಮಗೆ ತಿಳಿದಿದೆ.

ಶೇಕ್ ಗೆ ಬಹುಶಃ ಪುರಾವೆಗಳ ಬಗ್ಗೆ ತಿಳಿದಿಲ್ಲ. ಅವನು ಎಷ್ಟು ಹತಾಶವಾದದ ಪಕ್ಷಪಾತ ಹೊಂದಿದ್ದಾನೆಂದರೆ, ಯಾವುದೇ ಸಾಕ್ಷ್ಯಾಧಾರಗಳು ಅವನನ್ನು ಮೆಚ್ಚಿಸುವುದಿಲ್ಲ. ಅವನಿಗೆ ಮನವರಿಕೆ ಮಾಡುವ ಪ್ರಯತ್ನ ಕೇವಲ ಸಮಯ ವ್ಯರ್ಥವಷ್ಟೇ. ಕುರಾನ್ ಮತ್ತು ಬೈಬಲ್ ಕೋಪರ್ನಿಕಸನ ವಿರುದ್ಧವಾಗಿಲ್ಲ, ಅಥವಾ ಕೋಪರ್ನಿಕಸ್ ಅವುಗಳನ್ನು ವಿರೋಧಿಸುವುದಿಲ್ಲ. ಬೈಬಲ್ ಮತ್ತು ಕುರಾನ್ ಗಳನ್ನು ನೈಸರ್ಗಿಕ ವಿಜ್ಞಾನದ ಮೂಲಾಧಾರಗಳೆಂದು (ಪ್ರೈಮರ್ಗಳೆಂದು) ತಪ್ಪಾಗಿ ಹೇಳುವುದು ಹಾಸ್ಯಾಸ್ಪದ. ಅವು ಮನುಷ್ಯನ ಅರ್ಥ ಮತ್ತು ದೇವರೊಂದಿಗಿನ ಅವನ ಸಂಬಂಧಗಳನ್ನು ಇನ್ನಷ್ಟು ಮುಖ್ಯವೆಂದು ಪರಿಗಣಿಸುತ್ತವೆ:. ಅವುಗಳನ್ನು ಬರೆಯುವಾಗ  ಆ ಕಾಲಮಾನದ ಮತ್ತು ಇತರ ಎಲ್ಲ ಕಾಲಮಾನದ ಜನರಿಗೆ ಅರ್ಥವಾಗುವಂತಹ ಕಾವ್ಯಾತ್ಮಕ ಚಿಹ್ನೆಗಳಲ್ಲಿ ಬರೆಯಲಾಗಿದೆ. ಅರೇಬಿಯಾದ ರಾಜ ಶೇಕ್‌ನ ಬೇಡಿಕೆಯನ್ನು ಪಾಲಿಸಲಿಲ್ಲ. ಕೆಲವು ಜನರು ಜ್ಞಾನೋದಯಕ್ಕೆ ಹೆದರುತ್ತಾರೆ, ಏಕೆಂದರೆ ಜ್ಞಾನೋದಯವು ಅವರ ಪಟ್ಟಭದ್ರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಮತ್ತು ಅಸ್ಪಷ್ಟತೆಯನ್ನು ಉತ್ತೇಜಿಸಲು ಶಿಕ್ಷಣವನ್ನು ಬಳಸಬಾರದು ಎಂದು ಶೇಕ್‌ ಗೆ ತಿಳಿದಿತ್ತು.


        ಭೂಮಿಯು ಬ್ರಹ್ಮಾಂಡದ ಜ್ಯಾಮಿತೀಯ ಕೇಂದ್ರವಲ್ಲ, ಬಹುಶ: ಅದರ ಆಧ್ಯಾತ್ಮಿಕ ಕೇಂದ್ರವಾಗಿರಬಹುದು. ಭೂಮಿ ಬಾಹ್ಯಾಕಾಶದ ಕೇವಲ ಒಂದು ಧೂಳಿನ  ಕಣ. ಬಿಷಪ್ ಉಷರ್ ಅವರ ಲೆಕ್ಕಾಚಾರಗಳಿಗೆ ವಿರುದ್ಧವಾಗಿ, ಜಗತ್ತು 4004 ಬಿ.ಸಿ.ಯಲ್ಲಿ ಬಹುಶ: ಪ್ರಸ್ತುತ ಸ್ಥಿತಿಯಲ್ಲಿ ಕಾಣಿಸಿಕೊಂಡಿಲ್ಲ. ಆಧುನಿಕ ವಿಶ್ವವಿಜ್ಞಾನಿಗಳು ನೀಡಿದ ಬ್ರಹ್ಮಾಂಡದ ಯುಗದ ಅಂದಾಜುಗಳು ಇನ್ನೂ ಒರಟು ಅಂದಾಜುಗಳಾಗಿವೆ,  ಅಂದಾಜು ವಿಧಾನಗಳು ಪರಿಷ್ಕಾರಗೊಂಡಂತೆ, ಇವುಗಳನ್ನು ಪರಿಷ್ಕರಿಸಲಾಗುತ್ತದೆ (ಸಾಮಾನ್ಯವಾಗಿ ಮೇಲ್ಮುಖವಾಗಿ). ಕೆಲವು ವಿಶ್ವವಿಜ್ಞಾನಿಗಳು ಬ್ರಹ್ಮಾಂಡವನ್ನು ಸುಮಾರು 10 ಶತಕೋಟಿ ವರ್ಷಗಳಷ್ಟು ಹಳೆಯದು ಎನ್ನುತ್ತಾರೆ; ಇತರರು ೧೦ ಶತಕೋಟಿ ವರ್ಷಗಳ ಹಿಂದೆಯೇ ಬ್ರಂಹಾಂಡ ಅಸ್ತಿತ್ವದಲ್ಲಿರಬಹುದು ಮತ್ತು ಶಾಶ್ವತವಾಗಿ ಅಸ್ತಿತ್ವದಲ್ಲಿರಬಹುದು ಎಂದು ಭಾವಿಸುತ್ತಾರೆ. ಭೂಮಿಯ ಮೇಲಿನ ಜೀವದ ಮೂಲವು 3 ರಿಂದ 5 ಶತಕೋಟಿ ವರ್ಷಗಳಷ್ಟು ಹಳೆಯದೆಂದು ತಾತ್ಕಾಲಿಕವಾಗಿ ಅಂದಾಜಿಸಲಾಗಿದೆ; ತುಲನಾತ್ಮಕವಾಗಿ ಇತ್ತೀಚೆಗೆ, 2 ರಿಂದ 4 ಮಿಲಿಯನ್ ವರ್ಷಗಳ ಹಿಂದೆ ಮನುಷ್ಯನಂತಹ ಜೀವಿಗಳು ಭೂಮಿಯ ಮೇಲೆ ಕಾಣಿಸಿಕೊಂಡವು. ಭೂಮಿಯ ವಯಸ್ಸು, ಭೌಗೋಳಿಕ ಮತ್ತು ಪ್ಯಾಲಿಯಂಟೋಲಾಜಿಕ್ ಯುಗಗಳ ಅವಧಿ ಮತ್ತು ಮನುಷ್ಯನ ಪೂರ್ವಜರ ಪ್ರಾಚೀನತೆಯ ಅಂದಾಜುಗಳು ಈಗ ಮುಖ್ಯವಾಗಿ ರೇಡಿಯೊಮೆಟ್ರಿಕ್ ಪುರಾವೆಗಳನ್ನು ಆಧರಿಸಿವೆ: ಬಂಡೆಗಳಲ್ಲಿನ ಕೆಲವು ರಾಸಾಯನಿಕ ಅಂಶಗಳ ಐಸೊಟೋಪ್‌ಗಳ ಅನುಪಾತವನ್ನು ಅಳೆಯುವ ವಿಧಾನ ಇಂತಹ ಅಧ್ಯಯನಗಳಿಗೆ ಸೂಕ್ತವಾಗಿವೆ.


      ರೇಡಿಯೊಮೆಟ್ರಿಕ್ ಪುರಾವೆಗಳನ್ನು ಸ್ವೀಕರಿಸಲು ಶೇಕ್ ಬಿನ್ ಬಾಜ್ ಮತ್ತು ಅವರಂತಹವರು ನಿರಾಕರಿಸುತ್ತಾರೆ, ಏಕೆಂದರೆ ಇದು ಅವರಿಗೆ "ಕೇವಲ ಸಿದ್ಧಾಂತ". ಅದಕ್ಕೆ ಪರ್ಯಾಯವೇನು? ಸೃಷ್ಟಿಕರ್ತ ಭೂವಿಜ್ಞಾನಿಗಳು ಮತ್ತು ಜೀವಶಾಸ್ತ್ರಜ್ಞರ ಮೇಲೆ ಮೋಸಗೊಳಿಸುವ ತಂತ್ರಗಳನ್ನು ಆಡಲು ಪುರಾವೆಗಳನ್ನು ಸೃಷ್ಠಿಸಿದ್ದಾನೆಂದು ಒಬ್ಬರು ಭಾವಿಸಬಹುದು. ಭೂಮಿ ಕೇವಲ 6,000 ವರ್ಷಗಳಷ್ಟು ಹಳೆಯದಾಗಿದ್ದು,ಕೆಲವು ಬಂಡೆಗಳು 2 ಶತಕೋಟಿ ವರ್ಷಗಳು, ಇತರವುಗಳು 2 ಮಿಲಿಯನ್ ವರ್ಷದಷ್ಟು ಹಳೆಯವೆಂದು  ಯೋಚಿಸುವಂತೆ ನಮ್ಮನ್ನು ದಾರಿ ತಪ್ಪಿಸಲು ಐಸೊಟೋಪ್ ಅನುಪಾತಗಳೊಂದಿಗೆ ವಿವಿಧ ಬಂಡೆಗಳನ್ನು  ಎಚ್ಚರಿಕೆಯಿಂದ ದೇವರೇ ಜೋಡಿಸಿದ್ದಾನೆ. ಈ ರೀತಿಯ ಹುಸಿ ವಿವರಣೆಗಳು ಹೊಸತಲ್ಲ. ವಿಕಸವಾದದ ವಿರೋಧಿಗಳಲ್ಲಿ ಒಬ್ಬರಾದ ಪಿ. ಹೆಚ್. ಗೊಸ್ಸೆ ʼಓಂಫಾಲೋಸ್ʼ ("ದಿ ನಾವೆಲ್") ಎಂಬ ಪುಸ್ತಕವನ್ನು ಪ್ರಕಟಿಸಿದರು. ಈ ಅದ್ಭುತ ಪುಸ್ತಕದ ಸಾರಾಂಶವೇನೆಂದರೆ, ಆಡಮ್, ತನಗೆ ತಾಯಿಯಿಲ್ಲದಿದ್ದರೂ, ಹೊಕ್ಕುಳಿನಿಂದ ಹುಟ್ಟಿರುವುದಾಗಿಯೂ, ಮತ್ತು ಸೃಷ್ಟಿಕರ್ತನು ನಮಗೆ ಸಿಕ್ಕಿರುವ ಪಳೆಯುಳಿಕೆಗಳನ್ನು, ಅವು ಸಿಗುತ್ತಿರುವ ಜಾಗದಲ್ಲಿ ತಾನೇ ಇರಿಸಿರುವುದಾಗಿ ಹೇಳುತ್ತದೆ - ಇದು ದೇವರ ಉದ್ದೇಶಪೂರ್ವಕ ಕ್ರಿಯೆಯಾಗಿದ್ದು, ಪ್ರಾಚೀನತೆಯ ನೋಟವನ್ನು ಮತ್ತು ಭೌಗೋಳಿಕ ಕ್ರಾಂತಿಯ ರೂಪವನ್ನು ನೀಡುತ್ತದೆ. ಅಂತಹ ಎಲ್ಲಾ ಕಲ್ಪನೆಗಳಲ್ಲಿ ಮಾರಕ ನ್ಯೂನತೆಯನ್ನು ನೋಡುವುದು ಸುಲಭ. ಇವೆಲ್ಲವೂ  ಧರ್ಮನಿಂದನೆಯ ಲಕ್ಷಣಗಳಾಗಿದ್ದು, ಅವರೇ ದೇವರನ್ನು ಅಸಂಬದ್ಧ ವಂಚಕನೆಂದು ಆರೋಪಿಸುತ್ತಿರುವಂತೆ ತೋರುತ್ತದೆ. ಇದು ದಂಗೆಯಂತೆ ಕಾಣಿಸದಿದ್ದರೂ, ನಿಜವಾದ ದಂಗೆಯೇ ಆಗಿದೆ.


ಜೀವಿಗಳ ವೈವಿಧ್ಯತೆ


        ಜೀವಿಗಳ ವೈವಿಧ್ಯತೆ ಮತ್ತು ಏಕತೆಗಳು ಜೀವಿ ಪ್ರಪಂಚದ ಗಮನಾರ್ಹ ಮತ್ತು ಅರ್ಥಪೂರ್ಣ ಅಂಶಗಳಾಗಿವೆ. ಈವರೆಗೆ 1.5 ರಿಂದ 2 ಮಿಲಿಯನ್ ಜಾತಿಯ ಪ್ರಾಣಿಗಳು ಮತ್ತು ಸಸ್ಯಗಳನ್ನು ವಿವರಣೆ ಸಮೇತ ಅಧ್ಯಯನ ಮಾಡಲಾಗಿದ್ದು; ಇನ್ನೂ ವಿವರಿಸಬೇಕಾದ ಸಂಖ್ಯೆ ಬಹುಶಃ ದೊಡ್ಡದಾಗಿದೆ. ವಿವಿಧ ಗಾತ್ರಗಳು, ರಚನೆಗಳು ಮತ್ತು ಜೀವನ ವಿಧಾನಗಳ ವೈವಿಧ್ಯತೆಯು ದಿಗ್ಭ್ರಮೆಗೊಳಿಸುವಂತಹದ್ದಾದರೂ, ಬಹಳ ಆಕರ್ಷಕವಾಗಿದೆ. ಕೆಲವು ಉದಾಹರಣೆಗಳು ಕೆಳಗಿನಂತಿವೆ.

ಕಾಲು ಮತ್ತು ಬಾಯಿಗಳಲ್ಲಿ ರೋಗವನ್ನುಂಟುಮಾಡುವ ವೈರಸ್ ಗಳು, 8-12 ಮ್ಯೂ(µ) ವ್ಯಾಸದ ಗೋಳದಂತಿರುತ್ತವೆ. ನೀಲಿ ತಿಮಿಂಗಿಲವು ಬೆಳೆಯುತ್ತಾ, 30 ಮೀ ಉದ್ದ ಮತ್ತು 135 ಟನ್ ತೂಕವನ್ನು ತಲುಪುತ್ತದೆ. ಸರಳವಾದ ವೈರಸ್‌ಗಳು ಇತರ ಜೀವಿಗಳ ಜೀವಕೋಶಗಳಲ್ಲಿನ ಪರಾವಲಂಬಿಗಳಾಗಿ ಜೀವಿಸುತ್ತಾ, ಕೇವಲ  ಅವುಗಳ ಡಿಎನ್‌ಎ ಅಥವಾ ಆರ್‌ಎನ್‌ಎಯಷ್ಟೇ ವೈರಸ್‌ ಗಳನ್ನು ಪ್ರರಿನಿಧಿಸುತ್ತವೆ, ಈ ವೈರಸ್‌ ಗಳು ಆತಿಥಿ ಕೋಶಗಳ ಜೀವರಾಸಾಯನಿಕ ಯಂತ್ರೋಪಕರಣಗಳನ್ನು ತಮ್ಮ ಅನುವಂಶಿಕ ಮಾಹಿತಿಯನ್ನು ಪುನರಾವರ್ತಿಸಲು ಬಳಸಿಕೊಳ್ಳುತ್ತವೆ.  


         ವೈರಸ್‌ಗಳನ್ನು ಜೀವಿಗಳು ಅಥವಾ ವಿಲಕ್ಷಣ ರಾಸಾಯನಿಕ ವಸ್ತುಗಳು ಎಂದು ಪರಿಗಣಿಸಲಾಗುತ್ತದೆಯೇ ಎಂಬುದು ಅಭಿಪ್ರಾಯದ ವಿಷಯ ಅಥವಾ ಕೇವಲ ವ್ಯಾಖ್ಯಾನವಾಗಿದ್ದು, ಈ ವಿಧದ ಭಿನ್ನಾಭಿಪ್ರಾಯಗಳು ಅಸ್ತಿತ್ವದಲ್ಲಿರಬಹುದು ಎಂಬ ಅಂಶವೇ ಹೆಚ್ಚು ಮಹತ್ವದ್ದಾಗಿದೆ. ಇದರರ್ಥ ಜೀವಂತ ಮತ್ತು ನಿರ್ಜೀವ ವಸ್ತುಗಳ ನಡುವಿನ ಗಡಿರೇಖೆಯನ್ನು ಅಳಿಸಲಾಗಿದೆಯೆಂದು. ಸರಳತೆ-ಸಂಕೀರ್ಣತೆಗಳ ವರ್ಣಪಟಲದ ವಿರುದ್ಧ ತುದಿಯಲ್ಲಿ  ಮನುಷ್ಯರಾದ ನಾವೂ ಸೇರಿದಂತೆ ವಿವಿಧ ಕಶೇರುಕ ಪ್ರಾಣಿಗಳಿವೆ. ಮಾನವನ ಮೆದುಳಿನಲ್ಲಿ ಸುಮಾರು 12 ಬಿಲಿಯನ್ ನರಕೋಶಗಳಿದ್ದು, ಆ ನರಕೋಶಗಳ ನಡುವಿನ ಸಿನಾಪ್‌ಗಳು ಬಹುಶಃ ಸಾವಿರ ಪಟ್ಟು ಹೆಚ್ಚಿವೆ.


         ಕೆಲವು ಜೀವಿಗಳು ವೈವಿಧ್ಯಮಯ ಪರಿಸರದಲ್ಲಿ ವಾಸಿಸುತ್ತವೆ. ಈ ವಿಷಯದಲ್ಲಿ ಮನುಷ್ಯ ಉನ್ನತ ಸ್ಥಾನದಲ್ಲಿದ್ದಾನೆ. ಅವನು ನಿಜವಾದ ಕಾಸ್ಮೋಪಾಲಿಟನ್ (ಸರ್ವಾಂತರ್ಯಾಮಿ) ಪ್ರಭೇದ ಮಾತ್ರವಲ್ಲದೆ, ಅವನ ತಾಂತ್ರಿಕ ಸಾಧನೆಗಳ ಸಹಾಯದಿಂದ, ಚಂದ್ರನ ಮೇಲ್ಮೈಯಲ್ಲಿ ಮತ್ತು ಬಾಹ್ಯಾಕಾಶದಲ್ಲಿ ಕನಿಷ್ಠ ಒಂದು ಸೀಮಿತ ಸಮಯದವರೆಗೆ ಬದುಕಬಲ್ಲನಾಗಿದ್ದಾನೆ. ಇದಕ್ಕೆ ವಿರುದ್ಧವಾಗಿ, ಕೆಲವು ಜೀವಿಗಳು ಆಶ್ಚರ್ಯಕರವಾಗಿ ಎಲ್ಲಕ್ಕಿಂತ ಚೊಕ್ಕದಾದ ವಾಸಸ್ಥಳಕ್ಕೆ ಸೀಮಿತವಾಗಿವೆ. ಲ್ಯಾಬೌಲ್ಬೆನಿಯೇಶಿಯ  ಎಂಬ ಶಿಲೀಂಧ್ರ ಜೀರುಂಡೆ ಜಾತಿಯ ಎಫೆನಾಪ್ಸ್ ಕ್ರೋನಿಯ (Aphenops crone) ಎಲಿಟ್ರಾದ ದೇಹದ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಬೆಳೆಯುತ್ತದೆ, ಇದು ದಕ್ಷಿಣ ಫ್ರಾನ್ಸ್‌ನ ಕೆಲವು ಸುಣ್ಣದ ಗುಹೆಗಳಲ್ಲಿ ಮಾತ್ರ ಕಂಡುಬರುತ್ತದೆ. ನೊಣದ ಜಾತಿಗೆ ಸೇರಿದ, ಸೈಲೋಪಾ ದ ಲಾರ್ವಾಗಳು ಕ್ಯಾಲಿಫೋರ್ನಿಯಾದ ತೈಲ-ಹೊಲಗಳಲ್ಲಿನ ಕಚ್ಚಾ ತೈಲದ ಸೀಪೇಜ್‌ಗಳಲ್ಲಿ ಬೆಳೆಯುತ್ತವೆ; ನಮಗೆ ತಿಳಿದಿರುವಂತೆ ಅವುಗಳು ಬೇರೆಲ್ಲಿಯೂ ಕಂಡುಬಂದಿಲ್ಲ. ಎಣ್ಣೆಯಲ್ಲಿ ವಾಸಿಸಲು ಮತ್ತು ಎಣ್ಣೆಯನ್ನೇ ಆಹಾರವಾಗಿ ಸೇವಿಸಲು ಸಾಧ್ಯವಾಗುವ ಏಕೈಕ ಕೀಟ ಇದಾಗಿದ್ದು ಈ ಕೀಟದ ವಯಸ್ಕ ಹುಳವು, ತನ್ನ ಕಾಲಿನ ಭಾಗವಾದ, ಟಾರ್ಸೈನ ಸಹಾಯದಿಂದ  ಎಣ್ಣೆಯ ಮೇಲ್ಮೈಯಲ್ಲಿ ನಡೆಯಬಲ್ಲವಾಗಿವೆ. ಡ್ರೊಸೊಫಿಲಾ ಕಾರ್ಸಿನೊಫಿಲಾ ಎಂಬ ಹುಳದ ಲಾರ್ವಾಗಳು ನೆಲದ ಮೇಲೆ ಜೀವಿಸುವ ಏಡಿ ಪ್ರಬೇದವಾದ, ಜಿಯೋಕಾರ್ಸಿನಸ್ ರುರಿಕೋಲಾದ ಮೂರನೆಯ ಮ್ಯಾಕ್ಸಿಲಿಪ್ಡ್ನ ಫ್ಲಾಪ್ಗಳ ಕೆಳಗಿರುವ ನೆಫ್ರಿಕ್ ಚಡಿಗಳಲ್ಲಿ ಬೆಳೆಯುತ್ತವೆ, ಇದು ಕೆರಿಬಿಯನ್ ನ ಸರ್ಟೈನ್ ದ್ವೀಪಗಳಿಗೆ ಸೀಮಿತವಾಗಿದೆ. (ಚಿತ್ರ ೧, ೨, ೩ಅ ಮತ್ತು ೩ಆ)


    

ಚಿತ್ರ ೧- ಲ್ಯಾಬೌಲ್ಬೆನಿಯೇಶಿಯ ಶಿಲೀಂದ್ಚಿತ್ರ ೨- ಸೈಲೋಪಾ ಕೀಟ
ಚಿತ್ರ ೩ಅ  


ಚಿತ್ರ ೩ಆ - ಜಿಯೋಕಾರ್ಸಿನಸ್ ರುರಿಕೋಲಾದ ಮೇಲೆ ಪರಾವಲಂಬಿಗಳಾಗಿ ಬದುಕುವ ಡ್ರೊಸೊಫಿಲಾ ಕಾರ್ಸಿನೊಫಿಲಾ


ಜೀವಿಗಳ ಈ ಬೃಹತ್ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಸುಲಭ ವಿವರಣೆಯಿದೆಯೇ? ಲ್ಯಾಬೌಲ್ಬೆನಿಯಾ, ಅಫೆನಾಪ್ಸ್ ಕ್ರೋನಿ, ನೊಣಗಳಾದ ಸೈಲೋಪಾ ಪೆಟ್ರೋಲಿ ಮತ್ತು ಡ್ರೊಸೊಫಿಲಾ ಕಾರ್ಸಿನೊಫಿಲಾ, ಮತ್ತು ಇನ್ನೂ ಅನೇಕ ಸ್ಪಷ್ಟವಾದ ಜೈವಿಕ ಕುತೂಹಲಗಳಂತಹ ಈ ಅಸಾಮಾನ್ಯ ತೋರಿಕೆಯ ವಿಚಿತ್ರ ಜೀವಿಗಳು ಎಲ್ಲಿಂದ ಬಂದವು? ಈ ಎಲ್ಲವನ್ನು ಅರ್ಥೈಸುವ ಏಕೈಕ ವಿವರಣೆಯೆಂದರೆ, ಭೂಮಿಯ ಮೇಲಿನ ಪರಿಸರದ ವೈವಿಧ್ಯತೆಗೆ ಪ್ರತಿಕ್ರಿಯೆಯಾಗಿ ಸಾವಯವ ವೈವಿಧ್ಯತೆಯು ವಿಕಸನಗೊಂಡಿದ್ದು. ಯಾವುದೇ ಒಂದು ಪ್ರಭೇದ, ಎಷ್ಟೇ ಪರಿಪೂರ್ಣ ಮತ್ತು ಬಹುಮುಖಿಯಾಗಿದ್ದರೂ, ಬದುಕುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಾಗುವುದಿಲ್ಲ. ಲಕ್ಷಾಂತರ ಪ್ರಭೇದಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಜೀವನ ವಿಧಾನವನ್ನು ಹೊಂದಿದೆ ಮತ್ತು ಪರಿಸರದಿಂದ  ಪೋಷಿಸಲ್ಪಡುತ್ತದೆ. ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ಪ್ರಭೇದಗಳಿಗಿಂತ ವಿಭಿನ್ನವಾದ, ನಮಗೆ ತಿಳಿಯದ ಇನ್ನೂ ಅನೇಕ ಸಂಭಾವ್ಯ ಜೀವನ ವಿಧಾನಗಳಿವೆ; ಆದರೆ ಒಂದು ವಿಷಯ ಸ್ಪಷ್ಟವಾಗಿದೆ: ಸಾವಯವ ವೈವಿಧ್ಯತೆ ಕಡಿಮೆಯಿದ್ದಾಗ, ಬದುಕಲು ಕೆಲವು ಅವಕಾಶಗಳು ಬಳಕೆಯಾಗದೆ ಉಳಿಯುತ್ತವೆ. ವಿಕಾಸ ಪ್ರಕ್ರಿಯೆಯು ಲಭ್ಯವಿರುವ ಪರಿಸರದ  ನೆಲೆಗಳನ್ನು ತುಂಬಲು ಪ್ರಯತ್ನಿಸುತ್ತದೆ. ಪ್ರಕೃತಿ ಈ ಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿಯೊ ಅಥವಾ ಉದ್ದೇಶಪೂರ್ವಕವಾಗಿಯೊ ಮಾಡುವುದಿಲ್ಲ; ವಿಕಾಸ ಮತ್ತು ಪರಿಸರದ ನಡುವಿನ ಸಂಬಂಧಗಳು ಅದಕ್ಕಿಂತ ಹೆಚ್ಚು ಸೂಕ್ಷ್ಮ ಮತ್ತು ಹೆಚ್ಚು ಆಸಕ್ತಿಯವು. ಪರಿಸರವು ಅದರ ನಿವಾಸಿಗಳ ಮೇಲೆ ವಿಕಸನೀಯ ಬದಲಾವಣೆಗಳನ್ನು ಹೇರುವುದಿಲ್ಲ ಎಂದುದನ್ನು ಈಗಗಲೇ ಕೈಬಿಡಲಾದ ನವ-ಲಾಮಾರ್ಕಿಯನ್ ಸಿದ್ಧಾಂತಗಳಿಂದ ಪ್ರತಿಪಾದಿಸಲಾಗಿದೆ. ಈ ಪರಿಸ್ಥಿತಿಯನ್ನು ಊಹಿಸಲು ಉತ್ತಮ ಮಾರ್ಗವೆಂದರೆ: ಪರಿಸರವು ಜೀವಂತ ಪ್ರಭೇದಗಳಿಗೆ ಸವಾಲುಗಳನ್ನು ಒಡ್ಡುತ್ತದೆ, (ಪರಿಸರ ನಿರಂತರವಾಗಿ ಬದಲಾಗುತ್ತಿದ್ದು, ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಂಡಲ್ಲಿ ಮಾತ್ರ, ತಮ್ಮ ಸಂತತಿಯನ್ನು ಮುಂದುವರೆಸಬಹುದಾಗಿದೆ) ಪ್ರಭೇದಗಳು ಪರಿಸರ ಒಡ್ಡುವ ಸವಾಲಿಗೆ ಹೊಂದಿಕೊಳ್ಳುವ ಆನುವಂಶಿಕ ಬದಲಾವಣೆಗಳಿಂದ ಪ್ರತಿಕ್ರಿಯಿಸುತ್ತವೆ.

ಬದುಕಲು ಎಂದೂ ಉಪಯೋಗಿಸಿರದ ಜಾಗದಲ್ಲಿ ಬದುಕುವುದು, ಬದುಕಲು ಎಂದೂ ಬಳಸಿರದ ಹೊಸ ವಿಧಾನವನ್ನುಬಳಸಿ ಬದುಕಲು ಪ್ರಯತ್ನಿಸುವುದು ಜೀವಿಗಳಿಗೆ ಎದುರಾಗುವ ಬಹುದೊಡ್ಡ ಸವಾಲುಗಳು. ಅಂತೆಯೇ ಪರಿಸರ ಬದಲಾವಣೆಗಳಾದಂತಹ, ಹಿಮಯುಗದ ಹವಾಮಾನ ಮತ್ತು ಹಬೆಯ ವಾತಾವರಣಗಳಲ್ಲಿ (ಜಾಗತಿಕ ತಾಪಮಾನ) ಬದುಕುವುದೂ ಸಹ ದೊಡ್ಡ ಸವಾಲುಗಳು. ನೈಸರ್ಗಿಕ ಆಯ್ಕೆಯು ಪ್ರಭೇದಗಳು ಆನುವಂಶಿಕ ಬದಲಾವಣೆಗಳಿಂದ ಹೊಂದಿಕೊಂಡು, ಸವಾಲಿಗೆ ಪ್ರತಿಕ್ರಿಯಿಸಲು ಕಾರಣವಾಗಬಹುದು. ಇದೇ ಅನುವಂಶಿಕ ಬದಲಾವಣೆಗಳು, ಒಂದು ಪ್ರಭೇಧಕ್ಕೆ ಹೊಸ ಪರಿಸರದಲ್ಲಿ ವಾಸಿಸಲು ಅಥವಾ ಪರಿಸರ ಬದಲಾವಣೆಗಳು ಪ್ರತಿಕೂಲವಾಗಿದ್ದಲ್ಲಿ, ಅದರಲ್ಲೇ ಹೊಂದಿಕೊಂದು ಬದುಕಲು ಅನುವು ಮಾಡಿಕೊಡುತ್ತವೆ. ಆದರೆ ಹೊಂದಾಣಿಕೆಯ ಪ್ರತಿಕ್ರಿಯೆ ಯಶಸ್ವಿಯಾಗುವುದು ಅಥವಾ ಇಲ್ಲದಿರುವುದ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರಭೇಧಗಳು ಹೊಸ ಬದಲಾವಣೆಗಳಿಗೆ ಪ್ರತಿಕ್ರಿಯಿಸುವ  ಸಮಯದಲ್ಲಿ ಆ ಪ್ರಭೇಧಗಳ ಆನುವಂಶಿಕ ಸಂಯೋಜನೆ ಮುಖ್ಯ ಪಾತ್ರವಹಿಸುತ್ತದೆ. ಪ್ರತಿಕ್ರಿಯೆ ಯಶಸ್ವಿಯಾಗದಿದ್ದಲ್ಲಿ  ಪ್ರಭೇದಗಳು ನಶಿಸಿಹೋಗಬಹುದು.  ವಿಕಸನ ರೇಖೆಗಳ ಅಂತ್ಯ ಅಳಿದುಹೋಗುವಿಕೆ (Extinction) ಎಂದು ಪಳೆಯುಳಿಕೆಗಳ ಪುರಾವೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಪ್ರಸ್ತುತ ವಾಸಿಸುತ್ತಿರುವ ಜೀವಿಗಳು ಹಿಂದೆ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಪ್ರಭೇದಗಳ ಯಶಸ್ವಿ ವಂಶಸ್ಥರು.  ಅದೇನೇ ಇದ್ದರೂ, ಜೀವಿಪ್ರಭೇಧಗಳ ಸಂಖ್ಯೆ ಕಡಿಮೆಯಾಗಿಲ್ಲ; ವಾಸ್ತವವಾಗಿ, ಇದು ಬಹುಶಃ ಸಮಯದೊಂದಿಗೆ ಬೆಳೆದಿದೆ. ವಿಕಾಸ ಸಿದ್ಧಾಂತದ ಬೆಳಕಿನಲ್ಲಿ ಇದೆಲ್ಲವೂ  ಅರ್ಥವಾಗುತ್ತದೆ; ಆದರೆ ಬಹುಸಂಖ್ಯೆಯ ಜೀವಿಗಳನ್ನು  ಸೃಷ್ಠಿಸಿ ಮತ್ತು ನಂತರ ಅವುಗಳಲ್ಲಿ ಹೆಚ್ಚಿನವುಗಳನ್ನು ಸಾಯಲು ಅವಕಾಶ ಮಾಡಿಕೊಡುವುದು ದೇವರ  ಪ್ರಜ್ಞಾಶೂನ್ಯ ಕಾರ್ಯಾಚರಣೆಯಲ್ಲವೇ


         ಸಹಜವಾಗಿ, ನೈಸರ್ಗಿಕ ಆಯ್ಕೆಯ ಕ್ರಿಯೆಯಲ್ಲಿ ಪ್ರಜ್ಞಾಪೂರ್ವಕ ಅಥವಾ ಉದ್ದೇಶಪೂರ್ವಕವಾದದ್ದು ಏನೂ ಇಲ್ಲ. ಜೈವಿಕ ಪ್ರಭೇದವೊಂದು "ನಾಳೆ (ಅಥವಾ ಇಂದಿನಿಂದ ಒಂದು ಮಿಲಿಯನ್ ವರ್ಷಗಳ ನಂತರ) ಬೇರೆ ಮಣ್ಣಿನಲ್ಲಿ ಬೆಳೆಯಲು ಪ್ರಯತ್ನಿಸುತ್ತೇನೆ, ಅಥವಾ ಬೇರೆ ಬಗೆಯ ಆಹಾರವನ್ನು ತಿಂದು ಬದುಕುತ್ತೇನೆ  , ಅಥವಾ ಬೇರೆ ಏಡಿಯ ದೇಹದ ಬೇರೆ ಭಾಗದಲ್ಲಿ ಜೀವಿತ್ತೇನೆ" ಎಂದು ಸ್ವತಃ ಹೇಳಿಕೊಳ್ಳುವುದಿಲ್ಲ. ಮನುಷ್ಯನಿಗೆ ಮಾತ್ರ ಅಂತಹ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಇದೇ ಕಾರಣಕ್ಕೆ ಮಾನವ (ಹೋಮೋ ಸೇಪಿಯನ್ಸ್) ಪ್ರಭೇದವು ವಿಕಾಸದ ತುತ್ತ-ತುದಿಯಲ್ಲಿದೆ. ನೈಸರ್ಗಿಕ ಆಯ್ಕೆಯು ಕುರುಡು ಮತ್ತು ಸೃಜನಶೀಲ ಪ್ರಕ್ರಿಯೆಯಾಗಿದ್ದು, ಒಂದು ಸೃಜನಶೀಲ ಮತ್ತು ಕುರುಡು ಪ್ರಕ್ರಿಯೆ ಮಾತ್ರ ಒಂದು ಕಡೆ, ಮಾನವ ಪ್ರಭೇಧದ ಅದ್ಭುತವಾದ ಜೈವಿಕ ಯಶಸ್ಸನ್ನು ಮತ್ತೊಂದೆಡೆ, ಮೇಲೆ ಉಲ್ಲೇಖಿಸಿದ ಶಿಲೀಂಧ್ರ, ಜೀರುಂಡೆ ಮತ್ತು ನೊಣಗಳಂತೆ ಹೊಂದಾಣಿಕೆಯ ಸ್ವರೂಪಗಳನ್ನು ಕಿರಿದಾದಗಿಸಲು ಸಾಧ್ಯ.


        ನೈಸರ್ಗಿಕ ಆಯ್ಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಕಾಸವಾದದ ವಿರೋಧಿಗಳು ವಿಫಲರಾಗಿದ್ದಾರೆ. ಅಸ್ತಿತ್ವದಲ್ಲಿರುವ ಎಲ್ಲಾ ಪ್ರಭೇದಗಳನ್ನು ಕೆಲವು ಸಾವಿರ ವರ್ಷಗಳ ಹಿಂದೆ ಯಾವುದೋ ಅಲೌಕಿಕ ಶಕ್ತಿಯಿಂದ, ಇಂದು ನಾವು ಅವುಗಳನ್ನು ಕಾಣುವ ರೂಪದಲ್ಲೇ  ಸೃಷ್ಠಿಸಲಾಗಿದೆ ಎಂದು ಅವರು ತಿಳಿದಿದ್ದಾರೆ. ಆದರೆ 2 ಅಥವಾ 3 ಮಿಲಿಯನ್ ವಿವಿಧ ಜಾತಿಯ ಪ್ರಭೇದಗಳು ಭೂಮಿ ಮೇಲೆ ವಾಸಿಸತ್ತಿರುವುದರ ಅರ್ಥವೇನು? ನೈಸರ್ಗಿಕ ಆಯ್ಕೆಯೇ ವಿಕಾಸವನ್ನುಂಟುಮಾಡುವ ಮುಖ್ಯ ಅಂಶವಾಗಿದ್ದರೆ ಮಾತ್ರ, ಯಾವುದೇ ಸಂಖ್ಯೆಯ ಜಾತಿಗಳು, ಪ್ರಭೇದಗಳು ಬದುಕಿರಲು ಸಾಧ್ಯ: ನೈಸರ್ಗಿಕ ಆಯ್ಕೆಯು ಪೂರ್ವನಿರ್ಧರಿತ ಯೋಜನೆಯ ಪ್ರಕಾರ ಕಾರ್ಯನಿರ್ವಹಿಸುವುದಿಲ್ಲ, ಮತ್ತು ಪ್ರಭೇದಗಳು ಉತ್ಪತ್ತಿಯಾಗುವುದು ಅವು ಕೆಲವು ಉದ್ದೇಶಕ್ಕಾಗಿ ಅಗತ್ಯವಿರುವ ಕಾರಣದಿಂದ ಅಲ್ಲ. ಪರಿಸರಲ್ಲಿ ಬದುಕಲು ಇರುವ ಅವಕಾಶಗಳು ಮತ್ತು ಆನುವಂಶಿಕತೆಯ ಲಾಭಗಳು ಇದನ್ನು ಸಾಧ್ಯವಾಗಿಸುತ್ತವೆ. ಕ್ಯಾಲಿಫೋರ್ನಿಯಾ ತೈಲಕ್ಷೇತ್ರಗಳಲ್ಲಿ ವಾಸಿಸಲು, ಸೈಲೋಪಾ ಪೆಟ್ರೋಲಿಯನ್ನು ಮತ್ತು ಕೆರಿಬಿಯನ್‌ನ ಕೆಲವು ದ್ವೀಪಗಳ ಕೆಲವು ಭೂ ಏಡಿಗಳ ದೇಹದ ಕೆಲವು ಭಾಗಗಳಲ್ಲಿ ಪ್ರತ್ಯೇಕವಾಗಿ ವಾಸಿಸುವ ಡ್ರೊಸೊಫಿಲಾದ ಪ್ರಭೇದಗಳನ್ನು ಸೃಷ್ಠಿಸಿದಾಗ ಸೃಷ್ಟಿಕರ್ತನು ತಮಾಷೆಯ ಮನಸ್ಥಿತಿಯಲ್ಲಿದ್ದನೇನು? ಆದಾಗ್ಯೂ, ಸೃಷ್ಟಿಕರ್ತನು ಜೀವಂತ ಜಗತ್ತನ್ನು ಸೃಷ್ಟಿಸಿದ್ದು ಚಾಂಚಲ್ಯದಿಂದಲ್ಲ, ಆದರೆ ನೈಸರ್ಗಿಕ ಆಯ್ಕೆಯಿಂದ ಸಾಧ್ಯವಾದ ವಿಕಸನದಿಂದ ಎಂಬ ವಾದವು ಸಾವಯವ ವೈವಿಧ್ಯತೆಯುನ್ನು ಸಮಂಜಸ ಮತ್ತು ಅರ್ಥಪೂರ್ಣವಾಗಿಸುತ್ತದೆ. ಸೃಷ್ಟಿ ಮತ್ತು ವಿಕಾಸವನ್ನು ಪರಸ್ಪರ ಪ್ರತ್ಯೇಕ ಪರ್ಯಾಯಗಳಾಗಿ ಹಿಡಿದಿಟ್ಟುಕೊಳ್ಳುವುದು ತಪ್ಪು. ನಾನು ಸೃಷ್ಟಿಕ್ರಿಯೆಯನ್ನು ನಂಬುವವನೂ ಹಾಗು ವಿಕಾಸವಾದಿಯೂ ಹೌದು. ವಿಕಾಸವು ದೇವರ, ಅಥವಾ ಪ್ರಕೃತಿಯ, ಸೃಷ್ಟಿಯ ವಿಧಾನವಾಗಿದೆ. ಸೃಷ್ಟಿ 4004 ಬಿ.ಸಿ.ಯಲ್ಲಿ ನಡೆದ ಘಟನೆಯಲ್ಲ; ಇದು ಸುಮಾರು 10 ಶತಕೋಟಿ ವರ್ಷಗಳ ಹಿಂದೆ ಪ್ರಾರಂಭವಾದ ಮತ್ತು ಇನ್ನೂ ನಡೆಯುತ್ತಿರುವ  ಪ್ರಕ್ರಿಯೆಯಾಗಿದೆ.


ಜೀವನದ ಏಕತೆ


       ಜೀವನದ ಏಕತೆ ಅದರ ವೈವಿಧ್ಯತೆಗಿಂತೇನು ಕಡಿಮೆ ಗಮನಾರ್ಹವಲ್ಲ. ಜೀವನದ ವಿವಿಧ ರೂಪಗಳು ಅನೇಕ ವಿಷಯಗಳಲ್ಲಿ ಒಂದಕೊಂದನ್ನು ಹೋಲುತ್ತವೆ. ಸಾರ್ವತ್ರಿಕ ಜೈವಿಕ ಹೋಲಿಕೆಗಳು ಜೀವರಾಸಾಯನಿಕಗಳ ಆಯಾಮದಲ್ಲಿ ವಿಶೇಷವಾಗಿ ಗಮನಾರ್ಹವಾಗಿವೆ. ವೈರಸ್‌ಗಳಿಂದ ಹಿಡಿದು ಮನುಷ್ಯನವರೆಗೂ, ಆನುವಂಶಿಕತೆಯನ್ನು ಡಿಎನ್‌ಎ ಮತ್ತು ಆರ್‌ಎನ್‌ಎ ಎಂಬ ಕೇವಲ ಎರಡು ಸಂಬಂಧಿತ ರಾಸಾಯನಿಕಗಳಿಂದ ಸಂಕೇತಿಸಲಾಗುತ್ತದೆ: ಆನುವಂಶಿಕ ಸಂಕೇತವು ಎಷ್ಡು ಸಾರ್ವತ್ರಿಕವೋ ಅಷ್ಡೇ ಸರಳವೂ ಆಗಿದೆ. ಡಿಎನ್‌ಎಯಲ್ಲಿ (ಚಿತ್ರ )ಕೇವಲ ನಾಲ್ಕು ಆನುವಂಶಿಕ "ಅಕ್ಷರಗಳು" ಇವೆ: ಅಡೆನೈನ್, ಗ್ವಾನೈನ್, ಥೈಮಿನ್ ಮತ್ತು ಸೈಟೋಸಿನ್ ಮತ್ತು ಆರ್‌ಎನ್‌ಎ ಥೈಮಿನ್ ನ ಬದಲಾಗಿ ಯುರಾಸಿಲ್ ಎಂಬ ಅಕ್ಷರದಿಂದ ಮಾಡಲ್ಪಟ್ಟಿರುತ್ತದೆ. ಜೀವಿ ಪ್ರಪಂಚದ ಸಂಪೂರ್ಣ ವಿಕಸನೀಯ ಬೆಳವಣಿಗೆಯು ಆನುವಂಶಿಕ "ವರ್ಣಮಾಲೆ"ಯ ಹೊಸ "ಅಕ್ಷರಗಳ" ಆವಿಷ್ಕಾರದಿಂದಲ್ಲ, ಆದರೆ ಈ ಅಕ್ಷರಗಳ ಹೊಸ ಸಂಯೋಜನೆಗಳ ವಿಸ್ತರಣೆಯಿಂದ ಸಾಧ್ಯವಾಗಿದೆ.


       ಡಿಎನ್‌ಎ-ಆರ್‌ಎನ್‌ಎ ಗಳ ಆನುವಂಶಿಕ ಸಂಕೇತ ಸಾರ್ವತ್ರಿಕ ಮಾತ್ರವಲ್ಲದೆ, ಡಿಎನ್‌ಎ-ಆರ್‌ಎನ್‌ಎ ದಲ್ಲಿನ "ಅಕ್ಷರಗಳ" ಅನುಕ್ರಮಗಳನ್ನು ಪ್ರೋಟೀನ್‌ಗಳಲ್ಲಿನ ಅಮೈನೊ ಆಮ್ಲಗಳ ಅನುಕ್ರಮಗಳಾಗಿ ಅನುವಾದಿಸುವ ವಿಧಾನವೂ ಆಗಿದೆ. ಅದೇ 20 ಅಮೈನೋ ಆಮ್ಲಗಳು ಎಲ್ಲಾ ಜೀವಿಗಳಲ್ಲಿ ಅಸಂಖ್ಯಾತ ವಿಭಿನ್ನ ಪ್ರೋಟೀನ್‌ಗಳನ್ನು ಸಂಯೋಜಿಸುತ್ತವೆ. ವಿಭಿನ್ನ ಅಮೈನೋ ಆಮ್ಲಗಳನ್ನು ಡಿಎನ್‌ಎ ಮತ್ತು ಆರ್‌ಎನ್‌ಎಗಳಲ್ಲಿ ಒಂದರಿಂದ ಆರು ನ್ಯೂಕ್ಲಿಯೊಟೈಡ್ ತ್ರಿವಳಿಗಳಿಂದ ಸಂಕೇತಿಸಲಾಗುತ್ತದೆ. ಜೀವರಾಸಾಯನಿಕ ಸಾರ್ವತ್ರಿಕತೆಗಳು ಆನುವಂಶಿಕ ಸಂಕೇತ ಮತ್ತು ಅದರ ಪ್ರೋಟೀನ್‌ಗಳ ಅನುವಾದವನ್ನು ಮೀರಿ ವಿಸ್ತರಿಸುತ್ತವೆ: ವೈವಿಧ್ಯಮಯ ಜೀವಿಗಳ ಕೋಶಗಳ ಚಯಾಪಚಯ (Metabolism) ಕ್ರಿಯೆಯಲ್ಲಿ ಗಮನಾರ್ಹವಾದ ಏಕರೂಪತೆಗಳು ಮೇಲುಗೈ ಸಾಧಿಸುತ್ತವೆ. ಅಡೆನೊಸಿನ್ ಟ್ರೈಫಾಸ್ಫೇಟ್, ಬಯೋಟಿನ್, ರೈಬೋಫ್ಲಾವಿನ್, ಹೀಮ್ಸ್, ಪಿರಿಡಾಕ್ಸಿನ್, ವಿಟಮಿನ್ ಕೆ, ಬಿ-12, ಮತ್ತು ಫೋಲಿಕ್ ಆಮ್ಲಗಳು ಚಯಾಪಚಯ ಪ್ರಕ್ರಿಯೆಗಳನ್ನು ಎಲ್ಲಾ ಪ್ರಬೇದಗಳಲ್ಲಿ ಕಾರ್ಯಗತಗೊಳಿಸುತ್ತವೆ.


       ಈ ಜೀವರಾಸಾಯನಿಕ ಅಥವಾ ಜೈವಿಕ ಸಾರ್ವತ್ರಿಕತೆಯ ಅರ್ಥವೇನು? ನಿರ್ಜೀವ ವಸ್ತುವಿನಿಂದ ಜೀವನವು ಕೇವಲ ಒಂದು ಬಾರಿ ಮಾತ್ರ ಹುಟ್ಟಿಕೊಂಡಿತು ಮತ್ತು ಎಲ್ಲಾ ಜೀವಿಗಳು, ಇತರ ವಿಷಯಗಳಲ್ಲಿ ಎಷ್ಟೇ ವೈವಿಧ್ಯಮಯವಾಗಿದ್ದರೂ, ಆದಿಸ್ವರೂಪದ ಜೀವನದ ಮೂಲ ಲಕ್ಷಣಗಳು ಒಂದೇ ಆಗಿವೆ ಎಂಬುದನ್ನು ಸಾರ್ವರ್ತಿಕತೆ ಸೂಚಿಸುತ್ತದೆ (ಜೀವಿಗಳ ಉಗಮಕ್ಕೆ ಅನೇಕ ಮೂಲಗಳು ಇರವ ಸಾಧ್ಯತೆಯಿದ್ದು; ಅವುಗಳಲ್ಲಿ ಒಂದು ಸಂತತಿ ಉಳಿದುಕೊಂಡು ಭೂಮಿಯನ್ನು ಆನುವಂಶಿಕವಾಗಿ ಆಕ್ರಮಿಸಿಕೊಂಡಿದೆ). ಆದರೆ ವಿಕಾಸ ಕ್ರಿಯೆ ಇಲ್ಲದಿದ್ದರೆ, ಲಕ್ಷಾಂತರ ಪ್ರಭೇದಗಳಲ್ಲಿ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಸೃಷ್ಠಿಕರ್ತನಿಂದ ಸೃಷ್ಠಿಸಲ್ಪಡ್ಡಿರಬಹುದೇನು~ ಈ ಕಲ್ಪನೆಯು ಧಾರ್ಮಿಕ ಭಾವನೆ ಮತ್ತು ತಾರ್ಕಿಕತೆಗೆ ಆಕ್ರಮಣಕಾರಿಯಾಗಿದ್ದರೂ, ವಿಕಾಸವಾದದ ವಿರೋಧಿಗಳು ಸೃಷ್ಟಿಕರ್ತನ ಮೋಸಕ್ಕೆ ಮತ್ತೆ ಆರೋಪಿಸಬೇಕು. ಪ್ರಾಮಾಣಿಕವಾಗಿ ಸತ್ಯಶೋಧನೆಯಲ್ಲಿ ತೊಡಗಿಸಿಕೊಂಡವರನ್ನು ದಾರಿತಪ್ಪಿಸಲು ತನ್ನ ಸೃಷ್ಟಿಯ ವಿಧಾನವನ್ನು ವಿಕಾಸದಂತೆಯೇ  ಉದ್ದೇಶಪೂರ್ವಕವಾಗಿ ವ್ಯವಸ್ಥೆಗೊಳಿಸಿರುವ ದೇವರ ಆ ಕೆಲಸ ತಪ್ಪು ಎಂದು ಅವರು ಆರೋಪಿಸಬೇಕು.


       ಇತ್ತೀಚಿನ ವರ್ಷಗಳಲ್ಲಿನ ಆಣ್ವಿಕ ಜೀವಶಾಸ್ತ್ರದ ಗಮನಾರ್ಹ ಬೆಳವಣಿಗೆಗಳ ಸಹಾಯದಿಂದ ಅಂತಹ ಏಕತಾನತೆಯ ರಾಸಾಯನಿಕಗಳಿಂ, ವೈವಿಧ್ಯಮಯ ಜೀವಿಗಳು ಹೇಗೆ ನಿರ್ಮಿತಿಗೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ: ಪ್ರೋಟೀನ್‌ಗಳು ಕೇವಲ 20 ಬಗೆಯ ಅಮೈನೋ ಆಮ್ಲಗಳಿಂದ ಕೂಡಿವೆ ಮತ್ತು ಡಿಎನ್‌ಎ ಮತ್ತು ಆರ್‌ಎನ್‌ಎಗಳಿಂದ ಮಾತ್ರ ಸಂಕೇತಿಸಲ್ಪಡುತ್ತವೆ, ಪ್ರತಿಯೊಂದೂ ಕೇವಲ ನಾಲ್ಕು ನ್ಯೂಕ್ಲಿಯೋಟೈಡ್‌ಗಳಿಂದ ಮಾಡಲ್ಪಟ್ಟಿವೆ. ಈ ವಿಧಾನವು ಸರಳ ಮತ್ತು ಆಶ್ಚರ್ಯಕರ. ಎಲ್ಲಾ ಇಂಗ್ಲಿಷ್ ಪದಗಳು, ವಾಕ್ಯಗಳು, ಅಧ್ಯಾಯಗಳು ಮತ್ತು ಪುಸ್ತಕಗಳು ವರ್ಣಮಾಲೆಯ 26 ಅಕ್ಷರಗಳ ಅನುಕ್ರಮಗಳಿಂದ ಕೂಡಿದೆ (ಮೋರ್ಸ್ ಕೋಡ್‌ನ ಕೇವಲ ಮೂರು ಚಿಹ್ನೆಗಳಾದ ಡಾಟ್, ಡ್ಯಾಶ್ ಮತ್ತು ಗ್ಯಾಪ್ ಗಳಿಂದಲೂ ಅವುಗಳನ್ನು ಪ್ರತಿನಿಧಿಸಬಹುದು) ಒಂದು ಪದ ಅಥವಾ ವಾಕ್ಯದ ಅರ್ಥವನ್ನು ಯಾವ ಅಕ್ಷರಗಳು ಒಳಗೊಂಡಿರುತ್ತವೆ ಎಂಬುದರ ಮೂಲಕ ವ್ಯಾಖ್ಯಾನಿಸಲಾಗುವುದಿಲ್ಲ ಆದರೆ ಅದೇ ಅಕ್ಷರಗಳ ಅನುಕ್ರಮದಿಂದ ವ್ಯಾಖ್ಯಾನಿಸಬಹುದು. ಆನುವಂಶಿಕತೆಯಂತೆಯೂ ಇದರಂತೆಯೇ:  ಇಲ್ಲಿ ಡಿಎನ್‌ಎ ದಲ್ಲಿನ ನ್ಯೂಕ್ಲಿಯೋಟೈಡ್‌ಗಳ ಆನುವಂಶಿಕ "ಅಕ್ಷರಗಳ" ಅನುಕ್ರಮಗಳಿಂದ ಸಂಕೇತಿಸಲಾಗುತ್ತದೆ. ಅವುಗಳನ್ನು ಪ್ರೋಟೀನ್ಗಳಲ್ಲಿನ ಅಮೈನೋ ಆಮ್ಲಗಳ ಅನುಕ್ರಮಕ್ಕೆ ಅನುವಾದಿಸಲಾಗುತ್ತದೆ.


        ಜೀವರಾಸಾಯನಿಕಗಳ ಹೋಲಿಕೆಗಳು ಮತ್ತು ಜೀವಿಗಳ ನಡುವಿನ ವ್ಯತ್ಯಾಸಗಳ ನಿಖರ ಅಳತೆ ಆಣ್ವಿಕ ಅಧ್ಯಯನದ ಅನ್ವೇಷಣೆಗಳಿಂದ ಸಾಧ್ಯವಾಗಿದೆ. ಕೆಲವು ರೀತಿಯ ಕಿಣ್ವಗಳು ಮತ್ತು ಇತರ ಪ್ರೋಟೀನ್ಗಳು ಜೀವಂತ ಜಗತ್ತಿನಲ್ಲಿ ಅರೆ ಸಾರ್ವತ್ರಿಕ ಮತ್ತು ವ್ಯಾಪಕವಾಗಿವೆ. ವಿಭಿನ್ನ ಜೀವಿಗಳಲ್ಲಿ ಅವು ಕ್ರಿಯಾತ್ಮಕವಾಗಿ ಹೋಲುತ್ತವೆ, ಮತ್ತು ಒಂದೇ ರೀತಿಯ ರಾಸಾಯನಿಕ ಪ್ರತಿಕ್ರಿಯೆಗಳಲ್ಲಿ ವೇಗವರ್ಧಕಗಳಾಗಿ (Catalysts) ಕಾರ್ಯನಿರ್ವಹಿಸುತ್ತವೆ. ಆದರೆ ಅಂತಹ ಪ್ರೋಟೀನ್‌ಗಳನ್ನು ಪ್ರತ್ಯೇಕಿಸಿದಾಗ ಮತ್ತು ಅವುಗಳ ರಚನೆಗಳನ್ನು ರಾಸಾಯನಿಕವಾಗಿ ನಿರ್ಧರಿಸಿದಾಗ, ಅವು ವಿಭಿನ್ನ ಜೀವಿಗಳಲ್ಲಿ ಅಮೈನೊ ಆಮ್ಲಗಳ  ವಿಭಿನ್ನ ಅನುಕ್ರಮಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಹಿಮೋಗ್ಲೋಬಿನ್‌ನ ಆಲ್ಫಾ ಸರಪಳಿಗಳು ಮನುಷ್ಯ ಮತ್ತು ಚಿಂಪಾಂಜಿಯಲ್ಲಿ ಒಂದೇ ರೀತಿಯ ಅಮೈನೊ ಆಮ್ಲಗಳನ್ನು ಹೊಂದಿವೆ, ಆದರೆ ಅವು ಗೊರಿಲ್ಲಾದಲ್ಲಿ ಒಂದೇ ಅಮೈನೊ ಆಮ್ಲದಲ್ಲಿ (141 ರಲ್ಲಿ) ಭಿನ್ನವಾಗಿವೆ. ಮಾನವನ ಹಿಮೋಗ್ಲೋಬಿನ್‌ನ ಆಲ್ಫಾ ಸರಪಳಿಗಳು 17 ಅಮೈನೊ ಆಸಿಡ್ ಪರ್ಯಾಯಗಳಲ್ಲಿ ಜಾನುವಾರು ಹಿಮೋಗ್ಲೋಬಿನ್‌ಗಿಂತ ಭಿನ್ನವಾಗಿವೆ, ಕುದುರೆಯಿಂದ 18, ಕತ್ತೆಯಿಂದ 20, ಮೊಲದಿಂದ 25 ಮತ್ತು ಮೀನುಗಳಿಂದ (ಕಾರ್ಪ್) 71 ಅಮೈನೊ ಆಸಿಡ್ ನಷ್ಟು ಭಿನ್ನವಾಗಿವೆ .


       ಸೈಟೋಕ್ರೋಮ್ ಸಿ ಎಂಬ ಕಿಣ್ವವು ಆಮ್ಲಜನಕ ಉಪಯೋಗಿಸುವ (ಏರೋಬಿಕ್) ಕೋಶಗಳ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನುಷ್ಯನಿಂದ ಶಿಲೀಂದ್ರದವರೆಗೆ ವೈವಿಧ್ಯಮಯ ಜೀವಿಗಳಲ್ಲಿ ಕಂಡುಬರುತ್ತದೆ (ಚಿತ್ರ). ಇ. ಮಾರ್ಗೋಲಿಯಾಶ್, ಡಬ್ಲ್ಯೂ. ಎಂ. ಫಿಚ್, ಮತ್ತು ಇತರರು ಸೈಟೋಕ್ರೋಮ್ ಸಿ ಯಲ್ಲಿರುವ ಅಮೈನೊ ಆಸಿಡ್ ಅನುಕ್ರಮಗಳನ್ನು ಜೀವಿ ಪ್ರಪಂಚದ ವಿವಿಧ ಪ್ರಭೇದಗಳಲ್ಲಿ ಹೋಲಿಸಿ ಹೆಚ್ಚಿನ ಮಹತ್ವದ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಬೆಳಕಿಗೆ ತಂದಿದ್ದಾರೆ (ಚಿತ್ರ ೪). ಸಸ್ತನಿಗಳು ಮತ್ತು ಪಕ್ಷಿಗಳ ಹಲವು ಪ್ರಭೇದಗಳಲ್ಲಿನ ಸೈಟೋಕ್ರೋಮ್ ಸಿ ಕಿಣ್ವವು, 2 ರಿಂದ 17 ಅಮೈನೊ ಆಮ್ಲಗಳಲ್ಲಿ ವಿಭಿನ್ನವಾಗಿರುತ್ತದೆ, ಹಾಗೆಯೇ ಕಶೇರುಕಗಳ ವರ್ಗಗಳಲ್ಲಿ 7 ರಿಂದ 38, ಕಶೇರುಕಗಳು ಮತ್ತು ಕೀಟಗಳಲ್ಲಿ 23 ರಿಂದ 41 ಅಮೈನೊ ಆಮ್ಲಗಳು ಭಿನ್ನವಾಗಿರುತ್ತದೆ; ಮತ್ತು ಪ್ರಾಣಿಗಳು ಮತ್ತು ಶಿಲೀಂದ್ರಗಳಿಂದ 56 ರಿಂದ 72 ಅಮೈನೋ ಆಮ್ಲಗಳಲ್ಲಿ ಭಿನ್ನವಾಗಿವೆ. ಫಿಚ್ ಮತ್ತು ಮಾರ್ಗೋಲಿಯಾಶ್ ತಮ್ಮ ಆವಿಷ್ಕಾರಗಳನ್ನು “Minimal mutational distance” ಎಂದು ಕರೆದಿದ್ದಾರೆ.


     ವಿಭಿನ್ನ ಅಮೈನೊ ಆಮ್ಲಗಳನ್ನು ಜೀನ್‌ಗಳ ಡಿಎನ್‌ಎದಲ್ಲಿನ ನ್ಯೂಕ್ಲಿಯೊಟೈಡ್‌ಗಳ ವಿಭಿನ್ನ ತ್ರಿವಳಿಗಳಿಂದ ಸಂಕೇತಿಸಲಾಗುತ್ತದೆ (ಚಿತ್ರ ); ಈ ಸಂಕೇತಗಳು ಈಗ ನಮಗೆ ಚಿರಪರಿಚಿತ (ಚಿತ್ರ). ಹೆಚ್ಚಿನ ರೂಪಾಂತರಗಳು (Mutation) ನಿರ್ದಿಷ್ಟ ಪ್ರೋಟೀನ್‌ ನ ಡಿಎನ್‌ಎಯ ಯವುದೋ ಒಂದು ನ್ಯೂಕ್ಲಿಯೋಟೈಡ್ ನ  ಬದಲಿಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಒಂದು ಜೀವಿಯ ಸೈಟೋಕ್ರೋಮ್ ಸಿ ಅನ್ನು ಇನ್ನೊಂದಕ್ಕೆ ಬದಲಾಯಿಸಲು ಬೇಕಾದ ಕನಿಷ್ಠ ರೂಪಾಂತರಗಳ ಸಂಖ್ಯೆಯನ್ನು ಲೆಕ್ಕಹಾಕುವುದು ಸುಲಭ. ಮಾನವ ಸೈಟೋಕ್ರೋಮ್ ಸಿ ಮತ್ತು ಇತರ ಜೀವಿಗಳ ಸೈಟೋಕ್ರೋಮ್ ಸಿ ನಡುವಿನ ಕನಿಷ್ಠ ಪರಸ್ಪರ ದೂರಗಳು ಹೀಗಿವೆ:


[ಕೋತಿ-೧, ಕೋಳಿ-೧೮, ನಾಯಿ-೧೩, ಪೆಂಗ್ವಿನ್-೧೮, ಕುದುರೆ-೧೭, ಆಮೆ-೧೯, ಕತ್ತೆ-೧೬, ಹಾವು-೨೦, ಹಂದಿ-೧೩, ಮೀನು-೩೧, ಮೊಲ-೧೨, ನೊಣ-೩೩, ಕಾಂಗರೂ-೧೨, ಚಿಟ್ಟೆ-೩೬, ಬಾತುಕೋಳಿ-೧೭, ಶಿಲೀಂದ್ರ-೬೩, ಪಾರಿವಾಳ-೧೬, ಬುರುಗು(ಯೀಸ್ಟ್)-೫೬]ಚಿತ್ರ ೪ – ವಿವಿಧ ಜೀವಿಗಳ ಸೈಟೋಕ್ರೋಮ್‌ ಸಿ ಕಿಣ್ವದ ಅಮೈನೋ ಆಮ್ಲಗಳ ಹೋಲಿಕೆಯ ನಕ್ಷೆ. ಇದು ಸೀವೀವ್‌  ತಂತ್ರಾಂಶದಲ್ಲಿ ಮಸಲ್‌ ವಿಧಾನವನ್ನು ಬಳಸಿ ಸೃಷ್ಠಿಸಿದ ಮಲ್ಟಿಪಲ್‌ ಸೀಕ್ವೆನ್ಸ್‌ ಅಲೈನ್ಮೆಂಟ್(MSA)


       ಒಂದು ನಿರ್ದಿಷ್ಟ ರೀತಿಯ ಪ್ರೋಟೀನ್‌ನಲ್ಲಿನ ಅಮೈನೊ ಆಸಿಡ್ ಅನುಕ್ರಮಗಳು ಒಂದು ಪ್ರಭೇದದೊಳಗೆ ಮತ್ತು ಪ್ರಭೇದಗಳಿಂದ ಪ್ರಭೇದಗಳಿಗೆ ಬದಲಾಗುತ್ತವೆ ಎಂಬುದನ್ನು ಗಮನಿಸುವುದು ಮುಖ್ಯ. ಪ್ರಭೇದ, ಕುಲ, ಕುಟುಂಬ, ಕ್ರಮ, ವರ್ಗ ಮತ್ತು ಫೈಲಮ್ ಮಟ್ಟಗಳಲ್ಲಿನ ಪ್ರೋಟೀನ್‌ಗಳ ನಡುವಿನ ವ್ಯತ್ಯಾಸಗಳು ಒಂದು ಜಾತಿಯೊಳಗಿನ ಜೀವಿಗಳ ನಡುವೆ ಬದಲಾಗುವ ಅಂಶಗಳಿಂದ ಸಂಯೋಜಿಸಲ್ಪಟ್ಟಿರುತ್ತವೆ. ವೈಯಕ್ತಿಕ ಮತ್ತು ಗುಂಪಿನ ವ್ಯತ್ಯಾಸಗಳು ಕೇವಲ ಪರಿಮಾಣಾತ್ಮಕವಾಗಿರುತ್ತವೆಯೇ ಹೊರತು ಗುಣಾತ್ಮಕವಾಗಿ ಅಲ್ಲ. ಮೇಲಿನ ಪ್ರತಿಪಾದನೆಗಳನ್ನು ಬೆಂಬಲಿಸುವ ಪುರಾವೆಗಳು ಸಾಕಷ್ಟಿವೆ ಮತ್ತು ವೇಗವಾಗಿ ಬೆಳೆಯುತ್ತಿವೆ.


       ಮಾನವ ರಕ್ತದ ಹಿಮೋಗ್ಲೋಬಿನ್‌ಗಳ ಅಮೈನೊ ಆಸಿಡ್ ಅನುಕ್ರಮಗಳಲ್ಲಿನ ವೈಯಕ್ತಿಕ ವ್ಯತ್ಯಾಸಗಳ ಕುರಿತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಮಶೋಧನೆ ಮಾಡಲಾಗಿದೆ. ಇದರ ಮೂಲಕ 100 ಕ್ಕೂ ಹೆಚ್ಚು ರೂಪಾಂತರಗಳನ್ನು ಕಂಡುಹಿಡಿಯಲಾಗಿದೆ. ಅವುಗಳಲ್ಲಿ ಹೆಚ್ಚಿನವು ಏಕ ಅಮೈನೊ ಆಮ್ಲಗಳ ಬದಲಿಗಳ ಪರ್ಯಾಯಗಳನ್ನು ಒಳಗೊಂಡಿರುತ್ತವೆ, ಅವುಗಳು ಪತ್ತೆಯಾದ ವ್ಯಕ್ತಿಗಳಲ್ಲಿ ಅಥವಾ ಅವರ ಪೂರ್ವಜರಲ್ಲಿ ಆನುವಂಶಿಕ ರೂಪಾಂತರಗಳಿಂದ ಈ ಬದಲಾವಣೆಗಳು ಹುಟ್ಟಿಕೊಂಡಿವೆ. ನಿರೀಕ್ಷೆಯಂತೆ, ಈ ಕೆಲವು ರೂಪಾಂತರಗಳು ಅವುಗಳ ಹೊಂದಿದವರಿಗೆ ಹಾನಿಕಾರಕವಾಗಿದ್ದು, ಇತರವುಗಳು ತಟಸ್ಥವಾಗಿದ್ದು ಮತ್ತೆ ಕೆಲವು, ಕೆಲವು ಪರಿಸರದಲ್ಲಿ ಅನುಕೂಲಕರವಾಗಿರುತ್ತವೆ. ಕೆಲವು ರೂಪಾಂತರಿತ ಹಿಮೋಗ್ಲೋಬಿನ್‌ಗಳು ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಕುಟುಂಬದಲ್ಲಿ ಮಾತ್ರ ಕಂಡುಬಂದಿದ್ದು; ಇನ್ನೂ ಕೆಲವನ್ನು ವಿಶ್ವದ ವಿವಿಧ ಭಾಗಗಳ ನಿವಾಸಿಗಳಲ್ಲಿ ಪದೇ ಪದೇ ಕಂಡುಬರುತ್ತಿವೆ. ಈ ಎಲ್ಲಾ ಗಮನಾರ್ಹ ಸಂಶೋಧನೆಗಳು ವಿಕಾಸದ ಬೆಳಕಿನಲ್ಲಿ ಮಾತ್ರ ಅರ್ಥಪೂರ್ಣ ಇಲ್ಲವಾದಲ್ಲಿ ಅಸಂಬದ್ಧವೆಂದು ಎಂದು ನಾನು ಪ್ರಸ್ತಾಪಿಸುತ್ತೇನೆ.ಚಿತ್ರ – ೫ ಸೈಟೋಕ್ರೋಮ್‌ ಸಿ ಕಿಣ್ವದ ಅಮೈನೋ ಆಮ್ಲಗಳನ್ನು ಆಧರಿಸಿ ನಿರ್ಮಿಸಿದ ಫೈಲೋಜೆನೆಟಿಕ್‌ ಟ್ರೀ (ಏ ಫೈಲೋಜೆನೆಟಿಕ್‌ ಟ್ರೀಯನ್ನ ಮಿಸ್ಟರ್‌ ಬಯೇಸ್‌ ಎಂಬ ತಂತ್ರಾಂಶ ಉಪಯೋಗಿಸಿ ರಚಿಸಲಾಗಿದ್ದು, ಫಿಗ್‌ ಟ್ರೀ ತಂತ್ರಾಂಶದಿಂದ ಬಣ್ಣತುಂಬಲಾಗಿದೆ)


ತುಲನಾತ್ಮಕ ಅಂಗರಚನಾಶಾಸ್ತ್ರ ಮತ್ತು ಭ್ರೂಣಶಾಸ್ತ್ರ


       ಜೀವರಾಸಾಯನಿಕ ಸಾರ್ವತ್ರಿಕತೆಗಳು ಅತ್ಯಂತ ಪ್ರಭಾವಶಾಲಿಯಾದವು ಮತ್ತು ಇತ್ತೀಚೆಗೆ ಕಂಡುಹಿಡಿಯಲ್ಪಟ್ಟವಾಗಿವೆ, ಆದರೆ ಖಂಡಿತವಾಗಿಯೂ ಅವು ವಿಕಾಸದ ಮೂಲಕ ಸೃಷ್ಟಿ ಪ್ರಕ್ರಿಯೆಯ ಕೇವಲ ಕುರುಹುಗಳಲ್ಲ. ತುಲನಾತ್ಮಕ ಅಂಗರಚನಾಶಾಸ್ತ್ರ (Comarative Anatomy) ಮತ್ತು ಭ್ರೂಣಶಾಸ್ತ್ರವು (Embryology) ವಿಶ್ವದ ಪ್ರಸ್ತುತ ನಿವಾಸಿಗಳ ವಿಕಸನೀಯ ಮೂಲವನ್ನು ಘೋಷಿಸುತ್ತದೆ. 1555 ರಲ್ಲಿ ಪಿಯರೆ ಬೆಲಾನ್, ಮನುಷ್ಯ ಮತ್ತು ಪಕ್ಷಿಗಳ ಮೇಲ್ನೋಟಕ್ಕೆ ವಿಭಿನ್ನವಾದ ಅಸ್ಥಿಪಂಜರಗಳಲ್ಲಿ ಏಕರೂಪದ ಮೂಳೆಗಳ ಉಪಸ್ಥಿತಿಯನ್ನು ಕಂಡುಹಿಡಿದ (ಚಿತ್ರ ೬):  ನಂತರದ ಅಂಗರಚನಾಶಾಸ್ತ್ರಜ್ಞರು ಎಲ್ಲಾ ಕಶೇರುಕಗಳ ಅಸ್ಥಿಪಂಜರಗಳಲ್ಲಿ, ಹಾಗೆಯೇ ಇತರ ಅಂಗಗಳಲ್ಲಿ ಏಕರೂಪತೆಯನ್ನು ಪತ್ತೆಹಚ್ಚಿದರು. ಸಂಧಿಪದಿಗಳಾದ ಏಡಿ, ನೊಣ ಮತ್ತು ಚಿಟ್ಟೆಗಳ ಬಾಹ್ಯ ಅಸ್ಥಿಪಂಜರಗಳಲ್ಲಿಯೂ ಸಹ ಸಾಮ್ಯತೆಯನ್ನು ಕಾಣಬಹುದು. ಈ ಸಾಮ್ಯತೆಯ ಉದಾಹರಣೆಗಳನ್ನು ಅನಿರ್ದಿಷ್ಟವಾಗಿ ಗುಣಿಸಬಹುದು. 


ಚಿತ್ರ ೬ – ಮನುಷ್ಯ, ಚಿರತೆ, ತಿಮಿಂಗಲ ಮತ್ತು ಬಾವಲಿಗಳ ಮುಂಗಾಲುಗಳಲ್ಲಿನ ಏಕರೂಪದ ಮೂಳೆಗಳ ರಚನೆ
 ಚಿತ್ರ  ೭- ಜರ್ಮನ್ ಪ್ರಾಣಿಶಾಸ್ತ್ರಜ್ಞ ಅರ್ನ್ಸ್ಟ್ ಹೆಕೆಲ್ ಬಿಡಿಸಿದ ಕಶೇರುಕಗಳ ಭ್ರೂಣಗಳ ಹೋಲಿಕೆ


ಹಲವಾರು ವೈವಿಧ್ಯಮಯ ಪ್ರಾಣಿಗಳ ಭ್ರೂಣಗಳು ಸಾಮಾನ್ಯವಾಗಿ ಗಮನಾರ್ಹ ಹೋಲಿಕೆಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ. ಒಂದು ಶತಮಾನದ ಹಿಂದೆ ಕೆಲವು ಜೀವಶಾಸ್ತ್ರಜ್ಞರ (ಮುಖ್ಯವಾಗಿ ಜರ್ಮನ್ ಪ್ರಾಣಿಶಾಸ್ತ್ರಜ್ಞ ಅರ್ನ್ಸ್ಟ್ ಹೆಕೆಲ್) ಉತ್ಸಾಹದಿಂದ ಭ್ರೂಣದ ಹೋಲಿಕೆಗಳನ್ನು ಅಧ್ಯಯನ ಮಾಡಿ ʼʼಭ್ರೂಣವು ಅದರ ಬೆಳವಣಿಗೆಯಲ್ಲಿ ಅದರ ಪ್ರಭೇದಗಳ ವಿಕಸನೀಯ ಇತಿಹಾಸವನ್ನು ಪುನರಾವರ್ತಿಸುತ್ತದೆʼʼ ಎಂದು ಅರ್ಥೈಸಿದ್ದರು (ಚಿತ್ರ ೭): ಒಂದು ಭ್ರೂಣ ಬೆಳೆಯುವಾಗ ಅದರ ದೂರದ ಪೂರ್ವಜರನ್ನು ಹೋಲುವ ಹಂತಗಳ ಮೂಲಕ ಹಾದುಹೋಗುತ್ತಾ ಬೆಳೆಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರಂಭಿಕ ಜೀವಶಾಸ್ತ್ರಜ್ಞರು ಭ್ರೂಣದ ಬೆಳವಣಿಗೆಯನ್ನು ಅಧ್ಯಯನ ಮಾಡುವುದರ ಮೂಲಕ ವಿಕಾಸದ ಬೆಳವಣಿಗೆಯು ಸಾಗಿದ ಹಂತಗಳನ್ನು ಓದಬಹುದು ಎಂದು ಅರಿತಿದ್ದರು. ಈ  ಜೀವ ತಳಿಶಾಸ್ತ್ರದ (Biogenetic) ಸಿದ್ದಾಂತಗಳು ಬೆಳೆದು ಅವುಗಳ ಮೂಲಸ್ವರೂಪವನ್ನು ಕಳೆದುಕೊಂಡಿದ್ದರೂ, ಇನ್ನೂ ಭ್ರೂಣದ ಹೋಲಿಕೆಗಳು ನಿರ್ವಿವಾದವಾಗಿ ಪ್ರಭಾವಶಾಲಿ ಮತ್ತು ಗಮನಾರ್ಹವಾಗಿವೆ.


       ಕೋಪಪೋಡ್‌ಗಳಂತಹ ಮುಕ್ತವಾಗಿ ಈಜುವ ಕಠಿಣಚರ್ಮಿಗಳಿಗೂ (ಚಿತ್ರ ೮), ಜಡ ಶೀತಲವಲಯಗಳಿಗೂ (ಚಿತ್ರ ೯) ಯಾವುದೇ ಹೋಲಿಕೆಯಿಲ್ಲವೆಂದು ತೋರಬಹುದು. ನಾಪ್ಲಿಯಸ್ ಎಂಬ ಮುಕ್ತ-ಈಜು ಲಾರ್ವಾ ಹಂತದ ಮೂಲಕ ಶೀತಲವಲಯಗಳು ಬೆಳೆದು ಹೋಗುವುದು ಬಹಳ ಗಮನಾರ್ಹ ಸಂಗತಿ! ಅಭಿವೃದ್ಧಿಯ ಆ ಹಂತದಲ್ಲಿ ಶೀತಲವಲಯ ಮತ್ತು ಸೈಕ್ಲೋಪ್ಸ್ ಗಳು (ಚಿತ್ರ ೧೦) ನಿಸ್ಸಂದಿಗ್ಧವಾಗಿ ಒಂದಕ್ಕೊಂದನ್ನು ಹೋಲುತ್ತವೆ. ಅವು ಸ್ಪಷ್ಟವಾಗಿ ಹತ್ತಿರದ ಸಂಬಂಧಿಗಳೂ ಹೌದು. ಮಾನವ ಭ್ರೂಣಗಳಲ್ಲಿ ಮತ್ತು ಇತರ ಭೂಮಿಯ ಮೇಲೆ ಜೀವಿಸುವ ಕಶೇರುಕಗಳ ಭ್ರೂಣಗಳಲ್ಲಿ ಕಿವಿರು ಸೀಳುಗಳ (ಚಿತ್ರ ೧೧) ಉಪಸ್ಥಿತಿಯು ಮತ್ತೊಂದು ಪ್ರಸಿದ್ಧ ಉದಾಹರಣೆಯಾಗಿದೆ. ಸಹಜವಾಗಿ, ಬೆಳವಣಿಗೆಯ ಯಾವುದೇ ಹಂತದಲ್ಲಿ ಮಾನವ ಭ್ರೂಣವು ಮೀನಾಗಿರುವುದಿಲ್ಲ, ಅಥವಾ  ಎಂದಿಗೂ ಕಾರ್ಯನಿರ್ವಹಿಸುವ ಕಿವಿರುಗಳನ್ನು ಹೊಂದಿರುವುದಿಲ್ಲ. ಆದರೆ ಅದರ ದೂರದ ಪೂರ್ವಜರು ಕಿವಿರುಗಳ ಸಹಾಯದಿಂದ ಉಸಿರಾಡಿರದ ಹೊರತು ಅದು ಏಕೆ ಸ್ಪಷ್ಟವಾದ ಕಿವಿರು ಸೀಳುಗಳನ್ನು ಹೊಂದಿರಬೇಕು? ಸೃಷ್ಟಿಕರ್ತ ಮತ್ತೆ ಪ್ರಾಯೋಗಿಕ ಹಾಸ್ಯಗಳನ್ನು ಮಾಡಿತ್ತಿದ್ದಾನೆಯೇನು?

ಚಿತ್ರ ೮ -ಕೋಪೇಪೋಡ್‌

ಚಿತ್ರ ೯-ಶೀತಲವಚಿತ್ರ ೧೦- ನಾಪ್ಲಿಯಸ್‌ ಲಾರ್ವಾ
ಚಿತ್ರ ೧೧ : ಕೋಳಿ ಮತ್ತು ಮಾನವಭ್ರೂಣಗಳಲ್ಲಿ ಕಂಡುಬರುವ ಕಿವಿರು ಸೀಳುಗಳು


ಅಡಾಪ್ಟಿವ್ ರೇಡಿಯೇಶನ್: ಹವಾಯಿಯ ನೊಣಗಳು


     ಒಟ್ಟಾರೆಯಾಗಿ ಪ್ರಪಂಚದಲ್ಲಿ ಸುಮಾರು 2,000 ಜಾತಿಯ ಡ್ರೊಸೊಫಿಲಿಡ್ ನೊಣಗಳಿವೆ. ಹವಾಯಿ ದ್ವೀಪಸಮೂಹದ ಒಟ್ಟು ಪ್ರದೇಶವು ನ್ಯೂಜೆರ್ಸಿಯ ರಾಜ್ಯದಷ್ಟು ವಿಸ್ತೀರ್ಣ ಮಾತ್ರವಿದ್ದು,  ಕಾಲು ಭಾಗದಷ್ಟು ಡ್ರೊಸೋಫಿಲಾ ನೊಣದ ಪ್ರಭೇದಗಳು ಹವಾಯಿಯಲ್ಲಿ ಕಂಡುಬರುತ್ತವೆ. ಹವಾಯಿಯಲ್ಲಿನ 17 ಜಾತಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸ್ಥಳೀಯ (Endemic) ಪ್ರಭೇದಗಳಾಗಿವೆ ಇದಲ್ಲದೆ, ಹವಾಯಿಯನ್ ಸ್ಥಳೀಯತೆಯ  ಬಹುಪಾಲು  ಡ್ರೊಸೋಫಿಲಾ ನೊಣದ ಪ್ರಭೇದಗಳು ಬೇರೆಲ್ಲಿಯೂ ಕಂಡುಬರುವುದಿಲ್ಲ. ಅವುಗಳು ಒಂದೇ ದ್ವೀಪಗಳಿಗೆ ಅಥವಾ ದ್ವೀಪದ ಒಂದು ಭಾಗಕ್ಕೆ ಸೀಮಿತವಾಗಿವೆ. ಇಷ್ಟು ಸಣ್ಣ ಭೂಪ್ರದೇಶದಲ್ಲಿ ಡ್ರೊಸೊಫಿಲಿಡ್ ಪ್ರಭೇದಗಳ ಈ ಅಸಾಧಾರಣ ಪ್ರಸರಣಕ್ಕೆ ವಿವರಣೆ ಏನು? ಎಚ್. ಎಲ್. ಕಾರ್ಸನ್, ಹೆಚ್. ಟಿ. ಸ್ಪೀತ್, ಡಿ. ಇ. ಹಾರ್ಡಿ ಮತ್ತು ಇತರರ ಇತ್ತೀಚಿನ ಕೆಲಸಗಳು ಇದಕ್ಕೆ ವಿವರಣೆ ನೀಡುತ್ತವೆ.


     ಹವಾಯಿಯನ್ ದ್ವೀಪಗಳು ಜ್ವಾಲಾಮುಖಿಯಿಂದ ಉಂಟಾದವು; ಅವು ಯಾವತ್ತೂ ಯಾವುದೇ ಖಂಡದ ಭಾಗಗಳಾಗಿರಲಿಲ್ಲ. ಅವು 5.6 ರಿಂದ 0.7 ದಶಲಕ್ಷ ವರ್ಷಗಳಷ್ಟು ಹಳೆಯವು. ಮನುಷ್ಯ ಬರುವ ಮೊದಲು ಇಲ್ಲಿಯ ಡ್ರೋಸೋಫಿಲ ಪ್ರಭೇದಗಳು ಇಲ್ಲಿಗೆ ವಲಸೆ ಬಂದ ಹುಳಗಳಿಂದ ವಿಕಾಸಗೊಂಡಿದ್ದವು. ಇಲ್ಲಿಗೆ ಮೊದಲು ಬಂದ ನೊಣಗಳು ಗಾಳಿಯ ಪ್ರವಾಹ ಮತ್ತು ಇತರ ಆಕಸ್ಮಿಕ ವಿಧಾನಗಳಿಂದ ಸಾಗರದ ಮೂಲಕ ಈ ದ್ವೀಪಗಳನ್ನು ತಲುಪಿದವು. ಹಲವಾರು ಪ್ರತಿಸ್ಪರ್ಧಿಗಳಿದ್ದ ಮೊದಲಿನ ಜಾಗದಿಂದ ಹವಾಯಿಗೆ ಬಂದ ಒಂದೇ ಡ್ರೊಸೊಫಿಲಿಡ್ ಪ್ರಭೇದವು, ಇಲ್ಲಿ ಇನ್ನೂ ಆಕ್ರಮಿಸದ ಅನೇಕ ಪರಿಸರ  ನೆಲೆಗಳ ಸಮೃದ್ಧಿಯ ಸವಾಲನ್ನು ಎದುರಿಸಿದವು. ಇದರ ವಂಶಸ್ಥರು ಈ ಸವಾಲಿಗೆ ವಿಕಸನೀಯ ಹೊಂದಾಣಿಕೆಯಿಂದ ಪ್ರತಿಕ್ರಿಯಿಸಿದವು, ಇವುಗಳ ಉತ್ಪನ್ನಗಳೇ ಇಂದಿನ ಗಮನಾರ್ಹ ಹವಾಯಿಯನ್ ಡ್ರೊಸೊಫಿಲಿಡ್‌ಗಳಾಗಿವೆ. ಹವಾಯಿಯನ್ ನ ಸ್ಥಳೀಯ ಪ್ರಭೇದಗಳು ಯಾವುದೇ ರೀತಿಯಲ್ಲೂ ಪರಸ್ಪರ ಹೋಲದ ಕಾರಣ, ಅವು ಒಂದೇ ಜಾತಿಯ ರೂಪಾಂತರಗಳೆಂದು ತಪ್ಪಾಗಿ ಗ್ರಹಿಸಬಹುದು; ಅವು ಬೇರೆಡೆ ಡ್ರೊಸೊಫಿಲಿಡ್‌ಗಳಿಗಿಂತ ಹೆಚ್ಚು ವೈವಿಧ್ಯಮಯವಾಗಿದ್ದು  ಈವರೆಗೆ ನಮಗೆ ಗೊತ್ತಿರುವ ಅತಿದೊಡ್ಡ ಮತ್ತು ಅತಿಚಿಕ್ಕ ಡ್ರೊಸೊಫಿಲಿಡ್ ಪ್ರಭೇದಗಳು ಹವಾಯಿಯನ್ ದ್ವೀಪಕ್ಕೆ ಸೇರಿವೆಯಲ್ಲದೆ  ಬೆರಗುಗೊಳಿಸುವ ವೈವಿಧ್ಯಮಯ ವರ್ತನೆಗಳ ಮಾದರಿಗಳನ್ನು ಪ್ರದರ್ಶಿಸುತ್ತವೆ. ಅವುಗಳಲ್ಲಿ ಕೆಲವು ಡ್ರೊಸೊಫಿಲಿಡ್ ನೊಣಗಳು ಬಿನ್ನವಾದ ಅಸಾಧಾರಣ ಜೀವನ ವಿಧಾನಗಳಿಗೆ ಹೊಂದಿಕೊಂಡಿವೆ, ಉದಾಹರಣೆಗೆ ಕೆಲವು ನೊಣಗಳು ಜೇಡಗಳ ಮೊಟ್ಟೆಯ ಕೋಕೂನ್‌ಗಳಲ್ಲಿ ಪರಾವಲಂಬಿಗಳಾಗಿ ಜೀವಿಸುತ್ತವೆ.


       ವಿಶಾಲ ಪೆಸಿಫಿಕ್ ಮಹಾಸಾಗರದ ಮೇಲೆ ಹರಡಿರುವ ಹವಾಯಿಯನ್ನು ಹೊರತುಪಡಿಸಿದ ಇನ್ನಿತರ ಸಾಗರ ದ್ವೀಪಗಳಲ್ಲಿ ಸ್ಥಳೀಯ ಜಾತಿಯ ಡ್ರೊಸೊಫಿಲಿಡ್‌ಗಳು ಸಮೃದ್ಧವಾಗಿಲ್ಲ. ಇದಕ್ಕೆ ಅತ್ಯಂತ ಸಂಭವನೀಯ ವಿವರಣೆಯೆಂದರೆ, ಆ ಪ್ರಭೇದಗಳೂ ದ್ವೀಪಗಳಿಗೆ ಆಗಮಿಸಿದಾಗ ಅಲ್ಲಿನ  ಪರಿಸರದ ನೆಲೆಗಳು ಆಗಾಗಲೇ ತುಂಬಿದ ನಂತರ ಈ ಇತರ ದ್ವೀಪಗಳನ್ನು ಡ್ರೊಸೊಫಿಲಿಡ್‌ಗಳು ಆಕ್ರಮಿಸಿಕೊಂಡವು. ಇದು ಖಂಡಿತವಾಗಿಯೂ ಒಂದು  ಊಹೆ ಹೌದು, ಆದರೆ  ಸಮಂಜಸವಾದ ಊಹೆ.

     ವಿಕಾಸವಾದದ ವಿರೋಧಿಗಳು ಬಹುಶಃ ಪರ್ಯಾಯ ಊಹೆಯನ್ನು ಸೂಚಿಸಬಹುದು: ಗೈರುಹಾಜರಿಯ ಮನೋಭಾವದಿಂದ, ಸೃಷ್ಟಿಕರ್ತ ಹವಾಯಿಗಾಗಿ ಹೆಚ್ಚು ಹೆಚ್ಚು ಡ್ರೊಸೊಫಿಲಿಡ್ ಪ್ರಭೇದಗಳನ್ನು ತಯಾರಿಸಿ, ಈ ದ್ವೀಪಸಮೂಹದಲ್ಲಿ ಅವು ಅತಿರಂಜಿತ ಹೇರಳವಾಗಿರುವಂತೆ ಮಾಡಿರಬಹುದು ಎಂದುದು ಅವರ ಊಹೆ ಇರಬಹುದು. ಯಾವ ಊಹೆ ಅರ್ಥಪೂರ್ಣವಾಗಿದೆ ಎಂಬುದನ್ನು ನಿರ್ಧರಿಸಲು ನಾನು ಅದನ್ನು ನಿಮಗೇ ಬಿಡುತ್ತೇನೆ.


ಸಿದ್ಧಾಂತದ ಸಾಮರ್ಥ್ಯ ಮತ್ತು ಸ್ವೀಕಾರ


       ವಿಕಾಸದ ಬೆಳಕಿನಲ್ಲಿ ನೋಡಿದಾಗ ಜೀವಶಾಸ್ತ್ರವು ಬಹುಶಃ ಬೌದ್ಧಿಕವಾಗಿ ಅತ್ಯಂತ ತೃಪ್ತಿಕರ ಮತ್ತು ಸ್ಪೂರ್ತಿದಾಯಕ ವಿಜ್ಞಾನವಾಗಿದೆ. ಆ ಬೆಳಕು ಇಲ್ಲದೆ ವಿಜ್ಞಾನ ಕೇವಲ ಕುತೂಹಲಕಾರಿ ಸಂಗತಿಗಳ ರಾಶಿಯಾಗುತ್ತದೆಯೇ ಹೊರತು, ಒಟ್ಟಾರೆಯಾಗಿ ಯಾವುದೇ ಅರ್ಥಪೂರ್ಣ ಚಿತ್ರವನ್ನು ನೀಡುವುದಿಲ್ಲ. ಜೀವಶಾಸ್ತ್ರದ ಬಗ್ಗೆ ಮತ್ತು ವಿಕಾಸದ ಬಗ್ಗೆ ತಿಳಿದುಕೊಳ್ಳಬಹುದಾದ ಮತ್ತು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ತಿಳಿದಿದ್ದೇವೆ ಎಂದು ಇದು ಸೂಚಿಸುವುದಿಲ್ಲ. ಯಾವುದೇ ಸಮರ್ಥ ಜೀವಶಾಸ್ತ್ರಜ್ಞನು ಇನ್ನೂ ಬಗೆಹರಿಸಲಾಗದ ಸಮಸ್ಯೆಗಳ ಬಗ್ಗೆ ಮತ್ತು ಇನ್ನೂ ಉತ್ತರಿಸಲಾಗದ ಪ್ರಶ್ನೆಗಳ ಬಗ್ಗೆ ತಿಳಿದಿರುತ್ತಾನೆ.  ಜೈವಿಕ ಸಂಶೋಧನೆಯು ಎಂದಿಗೂ ಪೂರ್ಣಗೊಳ್ಳುವಂತಹದ್ದಲ್ಲ; ಇದಕ್ಕೆ ವಿರುದ್ಧವಾದದ್ದು ನಿಜ. ಜೀವಶಾಸ್ತ್ರಜ್ಞರಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಅಭಿಪ್ರಾಯಗಳ ನಡುವಿನ ಘರ್ಷಣೆಗಳು ಸಾಕಷ್ಟಿವೆ, ಏಕೆಂದರೆ ಅವು ಜೀವಂತ ಮತ್ತು ಸತತವಾಗಿ ಬೆಳೆಯುತ್ತಿರುವ ವಿಜ್ಞಾನದಲ್ಲಿ ಇರಲೇಬೇಕು. ಈ ಭಿನ್ನಾಭಿಪ್ರಾಯಗಳು ಇಡೀ ಸಿದ್ಧಾಂತದ ಸಂಶಯಾಸ್ಪದ ಸೂಚಕಗಳೆಂದು ವಿಕಾಸವಾದದ ವಿರೋಧಿಗಳು  ತಪ್ಪು ತಿಳಿಯುತ್ತಾರೆ, ಅಥವಾ ತಪ್ಪು ತಿಳಿದವರಂತೆ ನಟಿಸುತ್ತಾರೆ. ಉದ್ಧರಣಗಳನ್ನು ಎಚ್ಚರಿಕೆಯಿಂದ ಒಟ್ಟಿಗೆ ಜೋಡಿಸಿ, ಕೆಲವೊಮ್ಮೆ ಪರಿಣತಿಯಿಂದ ಸಂದರ್ಭಕ್ಕೆ ಅಸಂಭದ್ದವಾದ ವಿಷಯಗಳನ್ನು ಹೆಕ್ಕಿ ತೆಗೆದು ವಿಕಸನಕಾರರಲ್ಲಿ ಏನೂ ನಿಜವಾಗಿಯೂ ಸ್ಥಾಪಿತವಾಗಿಲ್ಲ ಅಥವಾ ಒಪ್ಪಲ್ಪಟ್ಟಿಲ್ಲ ಎಂದು ತೋರಿಸುವುದು ಅವರ ನೆಚ್ಚಿನ ಕ್ರೀಡೆಯಾಗಿದೆ. ನಾವು ಚರ್ಮದ ಅಡಿಯಲ್ಲಿ ನಿಜವಾಗಿಯೂ  ವಿಕಾಸ ಶಾಸ್ತ್ರದ ವಿರೋಧಿಗಳಾಗಿದ್ದೇವೆ ಎಂದು ಬೇರೆಯವರು ಉಲ್ಲೇಖಿಸುವ ರೀತಿಕಂಡು ನನ್ನ ಕೆಲವು ಸಹೋದ್ಯೋಗಿಗಳು ಮತ್ತು ನಾನೂ ಆಶ್ಚರ್ಯಚಕಿತರಾಗಿದ್ದೇವೆ.


       ವಿಕಾಸದ ಬಗ್ಗೆ ಸಮಂಜಸವಾದ ಅನುಮಾನವನ್ನು ಮೀರಿ ನಿಜವಾಗಿಯೂ ನಮಗೇನು ತಿಳಿದಿದೆ ಮತ್ತು  ಹೆಚ್ಚಿನ ಅಧ್ಯಯನಗಳ ಅಗತ್ಯವಿರುವದನ್ನು ನಾನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ವಿಕಾಸ, ಭೂಮಿಯ ಇತಿಹಾಸದಲ್ಲಿ ಯಾವಾಗಲೂ ನಡೆಯುತ್ತಿರುವ ಒಂದು ಪ್ರಕ್ರಿಯೆಯಾಗಿದ್ದು, ಸಾಕ್ಷ್ಯಗಳನ್ನು ಅರಿಯದವರು ಅಥವಾ ಸಾಕ್ಷ್ಯಗಳಿಗೆ ನಿರೋಧಕವಾಗಿರುವವರು, ಭಾವನಾತ್ಮಕ ನಿರ್ಬಂಧಗಳಿಂದಾಗಿ ಅಥವಾ ಸರಳ ಧರ್ಮಾಂಧತೆಯಿಂದ ಮಾತ್ರ ವಿಕಾಸಕ್ರಿಯೆಯನ್ನು ಅನುಮಾನಿಸಬಹುದು. ಇದಕ್ಕೆ ತದ್ವಿರುದ್ಧವಾಗಿ, ವಿಕಾಸ ಕ್ರಿಯೆಗೆ ಕಾರಣವಾಗುವ ಕಾರ್ಯವಿಧಾನಗಳಿಗೆ ಖಂಡಿತವಾಗಿಯೂ ಅಧ್ಯಯನ ಮತ್ತು ಸ್ಪಷ್ಟೀಕರಣದ ಅಗತ್ಯವಿದೆ. ವಿಮರ್ಶಾತ್ಮಕ ಪರೀಕ್ಷೆಯನ್ನು ತಡೆದುಕೊಳ್ಳಬಲ್ಲ ಇತಿಹಾಸವಾಗಿ ವಿಕಾಸಕ್ಕೆ ಯಾವುದೇ ಪರ್ಯಾಯಗಳಿಲ್ಲ. ಆದರೂ ನಾವು ವಿಕಸನ ಕಾರ್ಯವಿಧಾನಗಳ ಬಗ್ಗೆ ಹೊಸ ಮತ್ತು ಪ್ರಮುಖ ಸಂಗತಿಗಳನ್ನು ನಿರಂತರವಾಗಿ ಕಲಿಯುತ್ತಿದ್ದೇವೆ.


       ನಮಗೆ ಲಭ್ಯವಿರುವ ವಿಕಾಸದ ಬಗೆಗಿನ ಜ್ಞಾನದ ಅರಿವಿಲ್ಲದೆ ಒಂದು ಶತಮಾನಕ್ಕೂ ಹಿಂದೆ ಡಾರ್ವಿನ್ ವಿಕಾಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಿತ್ತು ಎಂಬುದು ಗಮನಾರ್ಹ ಸಂಗತಿ. 1900 ರ ನಂತರದ ತಳಿಶಾಸ್ತ್ರ, ವಿಶೇಷವಾಗಿ ಆಣ್ವಿಕ ತಳಿಶಾಸ್ತ್ರ, ಕಳೆದ ಎರಡು ದಶಕಗಳಲ್ಲಿ ವಿಕಸನೀಯ ಕಾರ್ಯವಿಧಾನಗಳ ತಿಳುವಳಿಕೆಗೆ ಅಗತ್ಯವಾದ ಮಾಹಿತಿಯನ್ನು ಒದಗಿಸಿದೆ. ಆದರೆ ಇನ್ನೂ ಹಲವಾರು ಅನುಮಾನಗಳಿವೆ ಮತ್ತು ಕಲಿಯಬೇಕಾದದ್ದು ಬಹಳಷ್ಟಿದೆ. ತನ್ನ ಕೆಲಸದ ಮೌಲ್ಯ ತಿಳಿದಿರುವ ಯಾವುದೇ ವಿಜ್ಞಾನಿಗೆ ಇದು ಹೃದಯಸ್ಪರ್ಶಿ ಮತ್ತು ಸ್ಪೂರ್ತಿದಾಯಕವಾಗಿದೆ. ಎಲ್ಲವೂ ಸಂಪೂರ್ಣವಾಗಿ ತಿಳಿದಿದೆ ಮತ್ತು ವಿಜ್ಞಾನವು ಕಂಡುಹಿಡಿಯಲು ಇನ್ನೇನೂ ಇಲ್ಲ ಎಂಬುದನ್ನು ಊಹಿಸಿಕೊಳ್ಳುವುದು ಎಂತಹ ದುಃಸ್ವಪ್ನ!


      ವಿಕಸನ ಸಿದ್ಧಾಂತವು ಧಾರ್ಮಿಕ ನಂಬಿಕೆಯೊಂದಿಗೆ ಘರ್ಷಣೆಗಿಳಿಯುತ್ತದೆಯೇ? ಖಂಡಿತ ಇಲ್ಲ. ಖಗೋಳವಿಜ್ಞಾನ, ಭೂವಿಜ್ಞಾನ, ಜೀವಶಾಸ್ತ್ರ ಮತ್ತು ಮಾನವಶಾಸ್ತ್ರದ ಪ್ರಾಥಮಿಕ ಪಠ್ಯಪುಸ್ತಕಗಳಿಗೆ, ಪವಿತ್ರ ಗ್ರಂಥವನ್ನು ತಪ್ಪಾಗಿ ಗ್ರಹಿಸುವುದು ಒಂದು ಪ್ರಮಾದ. ಚಿಹ್ನೆಗಳನ್ನು ಮೂಲ ಉದ್ದೇಶವನ್ನು   ತಪ್ಪಾಗಿ ಅರ್ಥೈಸಿಕೊಂಡರೆ ಮಾತ್ರ ಕಾಲ್ಪನಿಕ ಮತ್ತು ಕರಗದ ಘರ್ಷಣೆಗಳು ಉಂಟಾಗಬಹುದು. ಮೇಲೆ ಸೂಚಿಸಿದಂತೆ, ಈ ತಪ್ಪುತಿಳುವಳಿಕೆಯ ಪ್ರಮಾದವು ಧರ್ಮನಿಂದೆಗೆ ಕಾರಣವಾಗುತ್ತದೆ: ಸೃಷ್ಟಿಕರ್ತನು ವ್ಯವಸ್ಥಿತ ವಂಚನೆಯ ಆರೋಪ ಹೊರುತ್ತಾನೆ.


       ನಮ್ಮ ಯುಗದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ ಪಿಯರೆ ಟೀಲ್ಹಾರ್ಡ್ ಡಿ ಚಾರ್ಡಿನ್ ಹೀಗೆ ಬರೆದಿದ್ದಾರೆ: "ವಿಕಾಸವು ಒಂದು ಸಿದ್ಧಾಂತ, ವ್ಯವಸ್ಥೆ ಅಥವಾ ಕಲ್ಪನೆಯೇ? ಅದಕ್ಕೂ ಹೆಚ್ಚು - ಇದು ಎಲ್ಲಾ ಸಿದ್ಧಾಂತಗಳು, ಎಲ್ಲಾ ಊಹೆಗಳು, ಎಲ್ಲ ವ್ಯವಸ್ಥೆಗಳು ಇನ್ನು ಮುಂದೆ ವಿಕಾಸಕ್ಕೆ ತಲೆಬಾಗಬೇಕು. ವಿಕಾಸವು ಎಲ್ಲಾ ಸತ್ಯಗಳನ್ನು ಬೆಳಗಿಸುವ ಒಂದು ಬೆಳಕು, ಇದು ಎಲ್ಲಾ ಚಿಂತನೆಯ ರೇಖೆಗಳು ಅನುಸರಿಸಬೇಕಾದ ಒಂದು ಪಥವಾಗಿದೆ- ಇದೇ ವಿಕಾಸ. " ಸಹಜವಾಗಿ, ಕೆಲವು ವಿಜ್ಞಾನಿಗಳು, ಮತ್ತು ಕೆಲವು ದಾರ್ಶನಿಕರು ಮತ್ತು ದೇವತಾಶಾಸ್ತ್ರಜ್ಞರು ಟೀಲ್‌ಹಾರ್ಡ್‌ನ ಬೋಧನೆಗಳ ಕೆಲವು ಭಾಗಗಳನ್ನು ಒಪ್ಪುವುದಿಲ್ಲ; ಅವರ ವಿಶ್ವ ದೃಷ್ಟಿಕೋನದ ಸ್ವೀಕಾರವು ಸಾರ್ವತ್ರಿಕಕ್ಕಿಂತ ಕಡಿಮೆಯಾಗಿದೆ.


       ಆದರೆ ಟೀಲ್‌ಹಾರ್ಡ್ ನಿಜವಾದ ಮತ್ತು ಆಳವಾದ ಧಾರ್ಮಿಕ ವ್ಯಕ್ತಿಯಾಗಿದ್ದು, ಕ್ರಿಶ್ಚಿಯನ್ ಧರ್ಮವು ಅವನ ಪ್ರಪಂಚದ ದೃಷ್ಟಿಕೋನದ ಮೂಲಾಧಾರವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದಲ್ಲದೆ, ಅವರ ಪ್ರಪಂಚದ ದೃಷ್ಟಿಯಲ್ಲಿ ವಿಜ್ಞಾನ ಮತ್ತು ನಂಬಿಕೆಯನ್ನು ಇತರರಂತೆ ನೀರಿಲ್ಲದ ವಿಭಾಗಗಳಲ್ಲಿ ಬೇರ್ಪಡಿಸಲಾಗಿಲ್ಲ, ಅವು ಅವನ ಪ್ರಪಂಚದ ದೃಷ್ಟಿಕೋನದಕ್ಕೆ ಸಾಮರಸ್ಯದಿಂದ ಹೊಂದಿಕೊಳ್ಳುತ್ತಿದ್ದವು. ಟೀಲ್‌ಹಾರ್ಡ್ ಒಬ್ಬ ಸೃಷ್ಟಿಕ್ರಿಯೆಯಲ್ಲಿ ನಂಬಿದವನಾದರೂ, ಸೃಷ್ಟಿ ಈ ಜಗತ್ತಿನಲ್ಲಿ ವಿಕಾಸದ ಮೂಲಕ ಸಾಕಾರಗೊಂಡಿದೆ ಎಂದು ಅರ್ಥಮಾಡಿಕೊಂಡವನಾಗಿದ್ದನು.


                                                                      ****

99 views
  • Instagram
  • Facebook Clean Grey
  • Twitter Clean Grey
  • LinkedIn Clean Grey